
ಪುತ್ತೂರು: ಪುಟ್ಟ ಮಗುವೊಂದು ಕಾರಿನಲ್ಲಿ ಡೋರ್ ಲಾಕ್ ಆಗಿ ಬಾಕಿಯಾದ ಘಟನೆ ಪುತ್ತೂರು ನಗರದಲ್ಲಿ ಗುರುವಾರ ನಡೆದಿದೆ. ನಂತರ ಕಾರ್ ಶೋರೂಂ ಒಂದರ ಮೆಕ್ಯಾನಿಕ್ ಬಂದ ಮೇಲೆ ಬಾಗಿಲು ತೆರೆದು ಮಗುವನ್ನು ಹೊರ ತರಲಾಯಿತು.
ಪುತ್ತೂರಿನ ವಸ್ತ್ರ ಮಳಿಗೆಯೊಂದಕ್ಕೆ ಬಂದಿದ್ದ ದಂಪತಿಗಳು ಕಾರು ನಿಲ್ಲಿಸಿ ಜವುಳಿ ಅಂಗಡಿಯತ್ತ ಹೊರಟಿದ್ದರು. ಆದರೆ ಮಗು ಮಾತ್ರ ಕಾರಿನ ಒಳಗೆ ಬಾಕಿಯಾಗಿತ್ತು. ಕಾರಿನ ಕೀ ಮಗುವಿನ ಕೈಗೆ ಸಿಕ್ಕಿದ್ದು, ಅದು ಕೀ ಹಿಡಿದುಕೊಂಡು ಆಟವಾಡಲಾರಂಭಿಸಿತು. ಕೆಲವೇ ನಿಮಿಷದಲ್ಲಿ ಹೆತ್ತವರು ಮರಳಿದಾಗ ಡೋರ್ ಲಾಕ್ ಆಗಿರುವುದು ಬೆಳಕಿಗೆ ಬಂತು.
ಆತಂಕಗೊಂಡ ಹೆತ್ತವರು ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದರು. ಕಾರಿನ ಸುತ್ತ ಜನ ಜಮಾಯಿಸಿದಾಗ ಮಗು ಕಾರಿನೊಳಗೆ ಅಳಲಾರಂಭಿಸಿತು. ಕೊನೆಗೂ ದಾರಿ ಕಾಣದಾದಾಗ ನಗರದ ಶೋರೂಂ ಒಂದರ ತಂತ್ರಜ್ಞರನ್ನು ಕರೆಸಲಾಯಿತು. ಅವರು ಬಂದು ಕಾರಿನ ಹಿಂಬದಿ ಬಾಗಿಲಿನ ಗಾಜು ಒಡೆದು ಮಗುವನ್ನು ಹೊರತಂದರು. ಹೆತ್ತವರು ವಸ್ತ್ರ ಮಳಿಗೆಗೆ ತೆರಳುವಾಗ ಮಗುವನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಹೋದರೇ ಎಂಬುದು ತಿಳಿದು ಬಂದಿಲ್ಲ.














