
ಬೆಂಗಳೂರು: ಅನುಮಾನಸ್ಪದ ವ್ಯಕ್ತಿ ನಗರದ ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯಕ್ಷನಾಗಿದ್ದಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಮೆಜೆಸ್ಟಿಕ್ ಸೇರಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಿಲ್ದಾಣಗಳಲ್ಲಿ ಪ್ರತಿ ಪ್ರಯಾಣಿಕರ ತಪಾಸಣೆ ಹಾಗೂ ಬ್ಯಾಗ್ ಸೇರಿ ಪ್ರಯಾಣಿಕರ ಕಿಟ್‍ಗಳ ಪರಿಶೀಲನೆ ನಡೆಸಲಾಗುತ್ತಿದೆ.
ಶಂಕಿತ ವ್ಯಕ್ತಿ ಪ್ರತ್ಯಕ್ಷನಾಗಿ 3 ದಿನ ಕಳೆದ್ರೂ ಆತನ ಬಗ್ಗೆ ಸಣ್ಣ ಸುಳಿವು ಕೂಡಾ ಸಿಕ್ಕಿಲ್ಲ. ಈ ಹಿನ್ನೆಲೆ ಶಂಕಿತನ ಹುಡುಕಾಟಕ್ಕೆ ಪಶ್ಚಿಮ ವಿಭಾಗದ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಎಲ್ಲಾ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತಿರುವ ಪೊಲೀಸರು, ಮೆಜೆಸ್ಟಿಕ್ ಸುತ್ತಮುತ್ತಲಿನ ಲಾಡ್ಜ್ ಗಳಲ್ಲೂ ಸಹ ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೇ, ನಗರದ ಎಲ್ಲಾ ಪೊಲೀಸ್ ಠಾಣೆಗಳು ಸೇರಿದಂತೆ ರಾಜ್ಯದ ತನಿಖಾ ಸಂಸ್ಥೆಗಳ ಮೂಲಕ ಹೊರ ರಾಜ್ಯಗಳಿಗೂ ಶಂಕಿತನ ಪೋಟೋಗಳನ್ನು ರವಾನೆ ಮಾಡಲಾಗಿದೆ.
‘ವಿಶೇಷ ತಂಡ ರಚನೆ’
ಪಶ್ಚಿಮ ವಿಭಾಗ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಹಾಗೂ ಎಸಿಪಿ ಮಹಾಂತ್ ರೆಡ್ಡಿ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ಕಾಟನ್ ಪೇಟೆ ಇನ್ಸ್ ಪೆಕ್ಟರ್ ಕುಮಾರಸ್ವಾಮಿ , ಕೆ ಆರ್ ಮಾರ್ಕೆಟ್ ಇನ್ಸ್ ಪೆಕ್ಟರ್ ಮಾರುತಿ ಮತ್ತು ಚಾಮರಾಜ ಪೇಟೆ ಇನ್ಸ್ ಪೆಕ್ಟರ್ ಸೇರಿದಂತೆ ಸುಮಾರು 20 ಜನ ಸಿಬ್ಬಂದಿ ಒಳಗೊಂಡಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸದ್ಯ, ಸಿಸಿಟಿವಿ ಮತ್ತು ಮೊಬೈಲ್ ನೆಟ್‍ವರ್ಕ್ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದ್ದು, ಮೆಜೆಸ್ಟಿಕ್, ರೈಲು ನಿಲ್ದಾಣ ಸೇರಿ ಸುತ್ತಮುತ್ತಲಿನ ಸಿಸಿಟಿವಿ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.















