
ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೋಮವಾರ ಚಂದ್ರ ದರ್ಶನ ಆಗದ ಕಾರಣ ಮಂಗಳವಾರದಿಂದ ಉಪವಾಸ ಆರಂಭವಾಗಲಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ದಾನ ಮಾಡುವುದಕ್ಕೆ ವಿಶೇಷ ಪ್ರಾಮುಖ್ಯವಿದೆ. ಮೂಲ ಸೌಕರ್ಯ ಇಲ್ಲದವರಿಗೆ ಅದನ್ನು ಕೂಡಮಾಡುವುದು ಈ ತಿಂಗಳ ವಿಶೇಷಗಳಲ್ಲೊಂದು. ಕರಾವಳಿ ಕರ್ನಾಟಕದಲ್ಲಿ ಭಾನುವಾರವೇ ಚಂದ್ರ ದರ್ಶನವಾಗಿರುವುದರಿಂದ ಸೋಮವಾರದಿಂದಲೇ ರಂಜಾನ್ ಮಾಸ ಆರಂಭವಾಗಿದೆ.
ಪವಿತ್ರ ರಂಜಾನ್ ಹಬ್ಬದ ಬಗೆಬಗಿನ ಮಾಹಿತಿ
ಯಾವುದಾದರೂ ನಿಯಮ ಅಥವಾ ಸಂಹಿತೆಯನ್ನು ಮಾನವರ ಮುಂದಿಟ್ಟು ಅದನ್ನು ಅವರು ಪಾಲಿಸಬೇಕೆಂದು ಉಪದೇಶಿಸುವ ಎಲ್ಲ ಧರ್ಮ ಮತ್ತು ಪಂಥಗಳಲ್ಲಿ ಉಪವಾಸದ ಆಚರಣೆ ಇದೆ. ಕ್ರೈಸ್ತ ಮತ್ತು ಯಹೂದಿ ಧರ್ಮಗಳಲ್ಲಿ ಮಾತ್ರವಲ್ಲ ವೈದಿಕ, ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಉಪವಾಸ ಒಂದು ಮಹತ್ವದ ಆಚರಣೆಯಾಗಿದೆ. ಎಲ್ಲೆಡೆಯೂ ಅದನ್ನು ಅಂತರ್ಮುಖಿ ಚಿಂತನೆ, ಆತ್ಮಾವಲೋಕನ, ಆತ್ಮ ಸಂಸ್ಕರಣೆ ಮತ್ತು ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಉಪಾಧಿಯೆಂದು ಪರಿಗಣಿಸಲಾಗಿದೆ.
ಈ ಜಗತ್ತಿನಲ್ಲಿ ಕಣ್ಣು ತೆರೆಯುವ ಪ್ರತಿಯೊಬ್ಬ ಮಾನವನ ಮುಂದೆ ತಾನು ಹೇಗೆ ಬದುಕಬೇಕು ಎಂಬ ಪ್ರಶ್ನೆಗುತ್ತರವಾಗಿ ಈ ಎಲ್ಲ ಸವಾಲುಗಳನ್ನು ಎದುರಿಸುವುದಕ್ಕೆ ವಿವಿಧ ರೀತಿಯಲ್ಲಿ ಮಾನವನಿಗೆ ನೆರವಾಗುವುದು ಮತ್ತು ಆ ನಿಟ್ಟಿನಲ್ಲಿ ಅವನನ್ನು ಸಂಪೂರ್ಣ ಸಜ್ಜುಗೊಳಿಸುವುದೇ ರಮಝಾನ್ ತಿಂಗಳ ಉದ್ದೇಶವಾಗಿದೆ.
ಚಂದ್ರಮಾನ ಆಧಾರಿತ ಹಿಜರಿ ಕ್ಯಾಲೆಂಡರ್ ನ 9ನೇ ಮಾಸದ ಹೆಸರು ರಮದಾನ್ ಅಥವಾ ರಮಝಾನ್. ಇದಕ್ಕೆ ಸುಡುವ ವಸ್ತು, ತೀವ್ರ ಬಿಸಿಲ ತಾಪಕ್ಕೆ ಬೆಂದುಹೋದ ವಸ್ತು ಎಂಬಿತ್ಯಾದಿ ಶಬ್ದಾರ್ಥಗಳಿವೆ. ಇದು ಜನರಿಂದ ಸತ್ಕರ್ಮಗಳನ್ನು ಮಾಡಿಸುವ ಮೂಲಕ ಅವರ ಪಾಪಗಳನ್ನು ಸುಟ್ಟುಹಾಕುವ ತಿಂಗಳಾದ್ದರಿಂದ ಇದನ್ನು ಈ ರೀತಿ ಕರೆಯಲಾಗುತ್ತದೆಂದು ಹಲವರು ವ್ಯಾಖ್ಯಾನಿಸಿದ್ದಾರೆ.
ನಿಯಮಾನುಸಾರ ಬದುಕಬಯಸುವವರಿಗೆ ರಮಝಾನ್ ತಿಂಗಳ ಪ್ರಥಮ ಕೊಡುಗೆ – ಪವಿತ್ರ ಕುರ್‍ಆನ್ ಎಂಬ ಚೈತನ್ಯ ದಾಯಕ ಮಾರ್ಗದರ್ಶಿ ಗ್ರಂಥ. ಕುರ್‍ಆನ್ ಎಂಬ ಪದಕ್ಕೆ, ಪಠಣ, ಅಧ್ಯಯನ, ಸದಾ ಪಠಿಸಲಾಗುವ ಗ್ರಂಥ, ಪದೇ ಪದೇ ಪಠಿಸಲಾಗುವ ಗ್ರಂಥ ಇತ್ಯಾದಿ ಅರ್ಥಗಳಿವೆ.
ನಿಜವಾಗಿ, ಯಾವುದಾದರೂ ನಿಯಮ ಅಥವಾ ಸಂಹಿತೆಯನ್ನು ಮಾನವರ ಮುಂದಿಟ್ಟು ಅದನ್ನು ಅವರು ಪಾಲಿಸಬೇಕೆಂದು ಉಪದೇಶಿಸುವ ಎಲ್ಲ ಧರ್ಮ ಮತ್ತು ಪಂಥಗಳಲ್ಲಿ ಉಪವಾಸದ ಆಚರಣೆ ಇದೆ. ಕ್ರೈಸ್ತ ಮತ್ತು ಯಹೂದಿ ಧರ್ಮಗಳಲ್ಲಿ ಮಾತ್ರವಲ್ಲ ವೈದಿಕ, ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಉಪವಾಸ ಒಂದು ಮಹತ್ವದ ಆಚರಣೆಯಾಗಿದೆ. ಎಲ್ಲೆಡೆಯೂ ಅದನ್ನು ಅಂತರ್ಮುಖಿ ಚಿಂತನೆ, ಆತ್ಮಾವಲೋಕನ, ಆತ್ಮ ಸಂಸ್ಕರಣೆ ಮತ್ತು ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಉಪಾಧಿಯೆಂದು ಪರಿಗಣಿಸಲಾಗಿದೆ. ಉಪವಾಸಕ್ಕೆ ಸಂಬಂಧಿಸಿದ ನಿಬಂಧನೆಗಳು ವಿವಿಧ ಸಮಾಜಗಳಲ್ಲಿ ಭಿನ್ನವಾಗಿರಬಹುದು. ಆದರೆ ಅದರ ಉದ್ದೇಶ ಬಹುತೇಕ ಎಲ್ಲೆಡೆಯೂ ಸಮಾನವಾಗಿದೆ. ಚಿತ್ತವನ್ನು ಮಣಿಸಬೇಕು ಎಂಬುದೇ ಆ ಸಮಾನ ಉದ್ದೇಶ. ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸಂಹಿತೆಯನ್ನು ಒಪ್ಪಿ ಅದಕ್ಕೆ ನಿಷ್ಠವಾಗಿ ಬದುಕಲು ಹೊರಟಾಗ ಪ್ರಥಮವಾಗಿ ಅವನು ತನ್ನ ಚಿತ್ತದ ವಿರುದ್ಧ ಘರ್ಷಣೆಗೆ ಇಳಿಯ ಬೇಕಾಗುತ್ತದೆ. ಯಾಕೆಂದರೆ ಚಿತ್ತವೆಂಬುದು ಸ್ವಭಾವತಃ ನಿರಂಕುಶವಾದಿ. ಅದಕ್ಕೆ ಯಾವುದೇ ಕಟ್ಟುಪಾಡುಗಳು ಜೀರ್ಣವಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಒಲವು ಚಿತ್ತದ ಅವಿಭಾಜ್ಯ ಸ್ವಭಾವವಾಗಿರುತ್ತದೆ.
ಉಪವಾಸ ಆಚರಿಸುವವನು ಕೇವಲ ಕೊಬ್ಬು ವಿಸರ್ಜನೆ, ಸಂಪ್ರದಾಯ ಪಾಲನೆ ಅಥವಾ ಪುಣ್ಯ ಸಂಪಾದನೆಯನ್ನಷ್ಟೇ ಉದ್ದೇಶಿಸುವ ಬದಲು ಚಿತ್ತವನ್ನು ಮಣಿಸುವ ಹೊಣೆಯ ಬಗ್ಗೆ ಜಾಗೃತನಾಗಿದ್ದರೆ ಉಪವಾಸವು ಅವನ ಪಾಲಿಗೆ ಚಿತ್ತವನ್ನು ಕಟ್ಟಿಡುವ ಅತ್ಯಂತ ಪರಿಣಾಮಕಾರಿ ಸಾಧನವಾಗಿ ಬಿಡುತ್ತದೆ. ಉಪವಾಸದ ವೇಳೆ ಚಿತ್ತವು ಆಹಾರ ಪಾನೀಯಗಳ ಸೇವನೆಗೆ ಪದೇ ಪದೇ ಪ್ರಚೋದಿಸುತ್ತಿರುತ್ತದೆ. ಚಿತ್ತ ನಿಷ್ಠನಲ್ಲದ ಉಪವಾಸಿಗನು ಪ್ರತಿಬಾರಿಯೂ ಚಿತ್ತದ ಪ್ರಚೋದನೆಯನ್ನು ಪ್ರತಿರೋಧಿಸಿ, ಅದರ ಆದೇಶಗಳನ್ನು ಉಲ್ಲಂಘಿಸುವ ಮೂಲಕ ತನ್ನ ದೇವನಿಷ್ಠೆ ಹಾಗೂ ತತ್ವ ನಿಷ್ಠೆಯನ್ನು ಉಳಿಸಿಕೊಳ್ಳುತ್ತಾನೆ. ಈ ಪ್ರಕ್ರಿಯೆ ಪ್ರತಿದಿನ ಹಲವು ಬಾರಿ ನಡೆಯುತ್ತದೆ ಮತ್ತು ಸತತ ಒಂದು ತಿಂಗಳ ತನಕ ನಿತ್ಯ ನಡೆಯುತ್ತಿರುತ್ತದೆ. ಈ ಮೂಲಕ ಚಿತ್ತವನ್ನು ಪ್ರತಿರೋಧಿಸುವ ಅಭ್ಯಾಸ ಉಂಟಾಗುತ್ತದೆ.
ಇದೆಲ್ಲಾ, ಉಪವಾಸದ ಒಂದು ಭಾಗ ಮಾತ್ರ. ರಮಝಾನ್ ತಿಂಗಳಲ್ಲಿ ಕೇವಲ ಹಸಿವು ದಾಹಗಳನ್ನು ಸಹಿಸುವ ತರಬೇತಿ ಮಾತ್ರವಲ್ಲ, ಬುದ್ಧಿ, ಮನಸ್ಸುಗಳ ಸಹಿತ ದೇಹದ ಎಲ್ಲ ಅವಯವಗಳನ್ನು ಚಿತ್ತದ ದಾಸ್ಯದಿಂದ ಬಿಡಿಸಿ ಅವುಗಳನ್ನು ಸತ್ಯ ನಿಷ್ಠೆ ಹಾಗೂ ತತ್ವನಿಷ್ಠೆಗೆ ಒಗ್ಗಿಸುವ ತರಬೇತಿಯನ್ನೂ ಒದಗಿಸಲಾಗುತ್ತದೆ. ಹಸಿವು ದಾಹಗಳ ಮೂಲಕ ಮಾತ್ರವಲ್ಲದೆ ಮೌನ, ಏಕಾಂತ, ಜಾಗರಣೆ, ಪಠಣ, ಅಧ್ಯಯನ, ಶ್ರವಣದ ಮೂಲಕವೂ ಇಂದ್ರಿಯಗಳ ನಿಯಂತ್ರಣದ ತರಬೇತಿ ನೀಡಲಾಗುತ್ತದೆ. ಏಕಾಂತದಲ್ಲಿ ಒಂದಷ್ಟು ಆತ್ಮಾವಲೋಕನ, ಪಶ್ಚಾತ್ತಾಪ, ತಪ್ಪೊಪ್ಪಿಗೆ, ಚಿಂತನೆ, ದೇವನಾಮಗಳ ಧ್ಯಾನ ಮತ್ತು ಜಪ ಇತ್ಯಾದಿ ಚಟುವಟಿಕೆಗಳಲ್ಲಿ ಜನರು ಮಗ್ನರಾಗಿರುತ್ತಾರೆ. ಹಾಗೆಯೇ ನಿತ್ಯ 5 ಹೊತ್ತು ಸಾಮೂಹಿಕ ನಮಾಝ್ ನಲ್ಲಿ ಭಾಗವಹಿಸುವ ಜನರು ಕಡ್ಡಾಯ ನಮಾಝ್‍ಸಲ್ಲಿಸುವ ಜೊತೆ ಹೆಚ್ಚುವರಿ ಐಚ್ಛಿಕ ನಮಾಝ್‍ಗಳಲ್ಲೂ ನಿರತರಾಗಿರುತ್ತಾರೆ. ಒಟ್ಟಿನಲ್ಲಿ ಕೆಡುಕನ್ನು ಕಾಣಬೇಡ, ಕೇಳಬೇಡ ಮತ್ತು ಆಲಿಸಬೇಡ ಎಂಬ ಧೋರಣೆಯನ್ನು ಪಾಲಿಸುವ ಸಾಮೂಹಿಕ ಶ್ರಮವೊಂದು ರಮಝಾನ್ ತಿಂಗಳಲ್ಲಿ ನಡೆಯುತ್ತದೆ. ರಮಝಾನ್ ತಿಂಗಳಲ್ಲಿ ನಡೆಸುವ ದಾನ ಧರ್ಮ, ಅರಾಧನಾಕರ್ಮ, ಜನ ಸೇವಾ ಚಟುವಟಿಕೆ ಇತ್ಯಾದಿ ವಿವಿಧ ಸತ್ಕಾರ್ಯಗಳಿಗೆ, ವರ್ಷದ ಇತರ ದಿನಗಳಲ್ಲಿ ಸಿಗುವುದಕ್ಕಿಂತ ಹತ್ತಾರು ಪಟ್ಟು ಅಧಿಕ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆಂಬ ಸುವಾರ್ತೆಯ ಮೂಲಕ ಈ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಎಲ್ಲ ಬಗೆಯ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಜನರಿಗೆ ಪ್ರೋತ್ಸಾಹ ನೀಡಲಾಗಿದೆ.
ತಮ್ಮ ಬದುಕನ್ನು ತಿದ್ದಿಕೊಳ್ಳಲು, ಸಂಸ್ಕರಿಸಲು ಬಯಸುವವರಿಗಾಗಿ ಅದು ಸಮಾಜದಲ್ಲಿ ಒಂದು ಪೂರಕ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಈ ಮಾಸದಲ್ಲಿ ಉಪವಾಸಿಗರ ಮುಖ್ಯ ಗುರಿ, ಇದೇ ತಿಂಗಳಲ್ಲಿ ಬಂದ ಕುರ್‍ಆನ್ ಎಂಬ ದಿವ್ಯ ಮಾರ್ಗದರ್ಶನವನ್ನು ಓದಿ, ಅರಿತು, ಅಂಗೀಕರಿಸಿ ಅದನ್ನೇ ವಿಶ್ವಾಸ, ಚಾರಿತ್ರ್ಯಮತ್ತು ಬದುಕಿನ ಹಾದಿಯಾಗಿ ಅಳವಡಿಸಿಕೊಳ್ಳಲು ಶ್ರಮಿಸುವುದಾಗಿರುತ್ತದೆ. ಅದಕ್ಕಾಗಿ ಚಿತ್ತವನ್ನು ಮಣಿಸುವ, ಆತ್ಮಾವಲೋಕನ ಮತ್ತು ಪಶ್ಚಾತ್ತಾಪದ ಮೂಲಕ ಗತ ಪಾಪಗಳ ಹೊರೆಯಿಂದ ಮುಕ್ತರಾಗಿ ಹೊಸ ಹುಮ್ಮಸ್ಸಿನಿಂದ ಸನ್ಮಾರ್ಗ ನಿಷ್ಠ ಬದುಕು ಆರಂಭಿಸುವ ಶ್ರಮ ನಡೆಯುತ್ತದೆ. ಈ ಶ್ರಮ ಎಲ್ಲೋ ಮೂಲೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ನಡೆಸುವ ಶ್ರಮವಾಗಿರುವುದಿಲ್ಲ. ಸಂಪೂರ್ಣ ಮುಸ್ಲಿಂ ಸಮಾಜವೇ ಈ ಕಾರ್ಯದಲ್ಲಿ ತೊಡಗಿರುತ್ತದೆ. ಜಗತ್ತಿನೆಲ್ಲೆಡೆ ರಮಝಾನ್ ತಿಂಗಳ ಜೊತೆ ಮುಸ್ಲಿಮ್ ಸಮಾಜಕ್ಕೆ ವಿಶೇಷ ಭಾವನಾತ್ಮಕ ಸಂಬಂಧವಿದೆ. ಮಕ್ಕಳು ಮಹಿಳೆಯರು ಸೇರಿದಂತೆ ಸಮುದಾಯದ ಎಲ್ಲ ಸದಸ್ಯರು ರಮಝಾನ್ ತಿಂಗಳ ಆಗಮನಕ್ಕಾಗಿ ಹಲವು ದಿನಗಳ ಮುನ್ನವೇ ಕಾತರದಿಂದ ಕಾಯಲಾರಂಭಿಸುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಾರೆ. ಅದು ಬಂದಾಗ ಭಾರೀ ಉತ್ಸಾಹದಿಂದ ಅದನ್ನು ಸ್ವಾಗತಿಸುತ್ತಾರೆ.
ರಮಝಾನ್ ತಿಂಗಳಲ್ಲಿ ಮುಸ್ಲಿಮ್ ಸಮಾಜದ ಹೆಚ್ಚಿನೆಲ್ಲಾ ಸದಸ್ಯರು ಉಪವಾಸ ಆಚರಿಸುತ್ತಾರೆ. ಕೆಲವರು ಕೇವಲ ಔಪಚಾರಿಕವಾಗಿ ಪುಣ್ಯ ಸಂಪಾದನೆಯ ಸಂಕಲ್ಪದೊಂದಿಗೆ ಕುರ್‍ಆನ್ ಪಠಿಸುತ್ತಾರೆ. ಕೆಲವರು ಕನಿಷ್ಠ ದಿನಕ್ಕೊಂದು ಕಾಂಡವನ್ನು ಓದಿ ತಿಂಗಳೊಳಗೆ ಪೂರ್ಣ ಕುರ್‍ಆನ್ ಓದಿ ಮುಗಿಸುತ್ತಾರೆ. ಹಲವರು ಸಣ್ಣ ತಂಡಗಳನ್ನು ರಚಿಸಿಕೊಂಡು ತಜ್ಞರ ಮಾರ್ಗದರ್ಶನದಲ್ಲಿ ಕುರ್‍ಆನ್‍ನ ಅರ್ಥ ವ್ಯಾಖ್ಯಾನಗಳ ಅಧ್ಯಯನ ನಡೆಸುತ್ತಾರೆ. ವರ್ಷಾದ್ಯಂತ ಧರ್ಮದಿಂದ ದೂರ ಉಳಿದಿದ್ದವರು ರಮಝಾನ್ ಬಂತೆಂದರೆ ಧಾರ್ಮಿಕರಾಗಿ ಬಿಡುತ್ತಾರೆ. ಸಾಮಾನ್ಯವಾಗಿ ಮಸೀದಿಗಳಿಂದ ದೂರ ಇರುವವರು ಈ ತಿಂಗಳಲ್ಲಿ ಮಸೀದಿಗಳಲ್ಲಿ ಕಂಡು ಬರುತ್ತಾರೆ. ಎಲ್ಲೆಡೆ ಉಪದೇಶ, ಪ್ರವಚನ ಇತ್ಯಾದಿಗಳು ನಡೆಯುತ್ತಿರುತ್ತವೆ. ಜನರು ಪರಸ್ಪರರಿಗೆ ಸತ್ಯ, ನ್ಯಾಯ, ಸೌಜನ್ಯ, ಔದಾರ್ಯಗಳ ಪಾಠ ಹೇಳುತ್ತಿರುತ್ತಾರೆ. ಜನರಿಗೆ ಅವರ ಸಾಮಾಜಿಕ, ಆಧ್ಯಾತ್ಮಿಕ ಕರ್ತವ್ಯಗಳನ್ನು ನೆನಪಿಸಲಾಗುತ್ತದೆ. ಎಷ್ಟೋ ಮಂದಿ ಗಂಟೆಗಟ್ಟಲೆ ಆರಾಧನಾ ಕರ್ಮಗಳಲ್ಲಿ ನಿರತರಾಗಿರುತ್ತಾರೆ. ರಾತ್ರಿ ಸುಮಾರು 60 ರಿಂದ 90 ನಿಮಿಷಗಳವರೆಗೆ ನಡೆಯುವ ‘ತರಾವೀಹ್’ ಎಂಬ ವಿಶೇಷ ಐಚ್ಛಿಕ ಸಾಮೂಹಿಕ ನಮಾಝ್‍ನಲ್ಲಿ ಪಾಲುಗೊಳ್ಳುತ್ತಾರೆ. ಕೆಲವರು ಪ್ರಾತಃ ಪೂರ್ವದಲ್ಲಿ ಸುಮಾರು 3 ಗಂಟೆಯ ಹೊತ್ತಿಗೆ ಒಂಟಿಯಾಗಿ ಅಥವಾ ಕುಟುಂಬ ಸಹಿತ ‘ಖಿಯಾಮುಲ್ಲೈಲ್’ ಅಥವಾ ‘ತಹಜ್ಜುದ್’ ನಮಾಝ್‍ನಲ್ಲಿ ತೊಡಗುತ್ತಾರೆ.
ರಮಝಾನ್ ನಲ್ಲಿ ತರಬೇತಿಯ ಭಾಗವಾಗಿ, ಸಾಮಾನ್ಯವಾಗಿ ಉಣ್ಣುವ ಸಮಯಗಳಲ್ಲಿ ಆಹಾರ ಬಿಟ್ಟು ಉಪವಾಸವಿರಬೇಕಾಗುತ್ತದೆ ಮತ್ತು ಸಾಮಾನ್ಯವಾಗಿ ನಿದ್ರಿಸುವ ಸಮಯದಲ್ಲಿ ನಿದ್ದೆ ಬಿಟ್ಟು ಆಹಾರ ಸೇವಿಸಬೇಕಾಗುತ್ತದೆ. ಉಪವಾಸ ಸಾರ್ಥಕವಾಗಬೇಕಿದ್ದರೆ ಕೇವಲ ಅನ್ನ, ನೀರು, ನಿದ್ದೆಗಳನ್ನು ತ್ಯಜಿಸಿದರೆ ಸಾಲದು. ಬಹಳ ಕಟ್ಟುನಿಟ್ಟಾಗಿ ಕಣ್ಣು, ಬಾಯಿ ಮತ್ತು ಮನಸ್ಸನ್ನು ಕೂಡ ಎಲ್ಲ ಬಗೆಯ ಅಕ್ರಮ, ಅನೈತಿಕ ಮತ್ತು ಅಶ್ಲೀಲ ಆಲೋಚನೆ, ಮಾತು, ದೃಶ್ಯ, ಶ್ರವಣ ಮತ್ತು ಚಟುವಟಿಕೆಗಳಿಂದ ದೂರ ಇಟ್ಟಿರಬೇಕಾಗುತ್ತದೆ. ಕಿಂಚಿತ್ತಾದರೂ ಧಾರ್ಮಿಕ ಪ್ರಜ್ಞೆ ಇರುವವರ ಮುಂದೆ ಯಾರಾದರೂ ಇನ್ನೊಬ್ಬರನ್ನು ದೂಷಿಸುವ ಮಾತುಗಳನ್ನಾಡಿದರೆ ಅವರು ಪ್ರವಾದಿ ವಚನಗಳನ್ನು ಉದ್ಧರಿಸಿ, ”ಅಣ್ಣಾ, ನೀವು ಈ ರೀತಿಯ ಮಾತುಗಳನ್ನಾಡುವುದಾದರೆ ಸುಮ್ಮನೆ ಅನ್ನ ನೀರು ತ್ಯಜಿಸಿ ಕಷ್ಟ ಪಡಬೇಡಿ. ಉಪವಾಸ ಬಿಟ್ಟು ಬಿಡಿ.
ಇಂತಹ ಉಪವಾಸದಿಂದ ನಿಮಗೆ ಯಾವ ಲಾಭವೂ ಇಲ್ಲ” ಎಂದು ಎಚ್ಚರಿಸುತ್ತಾರೆ. ಈ ತಿಂಗಳಲ್ಲಿ ಜನರು ದೇವರ ಜೊತೆಗಿನ ಸಂಬಂಧವನ್ನು ಮಾತ್ರವಲ್ಲ, ಸಹಜೀವಿಗಳ ಜೊತೆಗಿನ ತಮ್ಮ ಸಂಬಂಧಗಳನ್ನೂ ಸುಧಾರಿಸಿಕೊಳ್ಳುತ್ತಾರೆ. ಯಾರಿಂದಾದರೂ ಸಾಲ ಪಡೆದು ಪಾವತಿಸಿಲ್ಲದವರು ಈ ತಿಂಗಳಲ್ಲಿ ಅದನ್ನು ಪಾವತಿಸುತ್ತಾರೆ. ಎಷ್ಟೋ ಮಂದಿ ತಮ್ಮಿಂದ ಸಾಲ ಪಡೆದವರು ಸಂಕಷ್ಟದಲ್ಲಿದ್ದರೆ ಅವರ ಸಾಲವನ್ನು ಕ್ಷಮಿಸಿ ಬಿಡುತ್ತಾರೆ. ಇದು ದೇವರ ಬಳಿ ಕ್ಷಮೆ ಯಾಚಿಸುವ ಮತ್ತು ದೇವರಿಂದ ಕ್ಷಮೆಯನ್ನು ನಿರೀಕ್ಷಿಸುವ ತಿಂಗಳು. ಯಾರಿಗಾದರೂ ಬೈದಿದ್ದರೆ, ಯಾರನ್ನಾದರೂ ನಿಂದಿಸಿದ್ದರೆ ಅಥವಾ ಬೇರೇನಾದರೂ ಅನ್ಯಾಯ ಮಾಡಿದ್ದರೆ ಸಂಕೋಚಬಿಟ್ಟು ಅವರ ಬಳಿ ಹೋಗಿ ಕ್ಷಮೆ ಕೇಳುತ್ತಾರೆ. ವರ್ಷವಿಡೀ ಜಿಪುಣರಾಗಿದ್ದವರು ಕೂಡಾ ಈ ತಿಂಗಳು ಬಂತೆಂದರೆ ಉದಾರಿಗಳಾಗಿ ಬಿಡುತ್ತಾರೆ. ಝಕಾತ್ (ಕಡ್ಡಾಯ ದಾನ) ಮತ್ತು ಸದಕಃ (ಐಚ್ಛಿಕ ದಾನ) ಪಾವತಿಸುತ್ತಾರೆ. ಎಷ್ಟೋ ಮಂದಿಯ ಬದುಕು ಶಾಶ್ವತವಾಗಿ ಬದಲಾಗುವುದಕ್ಕೆ, ಶಿಸ್ತು ಬದ್ಧವಾಗುವುದಕ್ಕೆ, ದುಶ್ಚಟಗಳಿಂದ ಮುಕ್ತವಾಗುವುದಕ್ಕೆ ಮತ್ತು ಸಮಾಜದ ಬಗ್ಗೆ ಹೆಚ್ಚು ಸಂವೇದನಾಶೀಲವಾಗುವುದಕ್ಕೆ ಈ ತಿಂಗಳು ನೆಪವಾಗುತ್ತದೆ.















