
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪತ್ನಿ ಭಗವತಿ ಬೆನ್ ಇಹಲೋಕ ತ್ಯಜಿಸಿದ್ದಾರೆ. 55 ವರ್ಷದ ಭಗವತಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಅವ್ರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭಗವತಿ ಬೆನ್ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಭಗವತಿ ಬೆನ್ ಅಂತಿಮ ಸಂಸ್ಕಾರ ಇಂದೇ ನಡೆಯಲಿದೆ. ಪ್ರಹ್ಲಾದ್ ಮೋದಿ, ನರೇಂದ್ರ ಮೋದಿಗಿಂತ ಎರಡು ವರ್ಷ ಚಿಕ್ಕವರು. ಅಹಮದಾಬಾದ್ ನಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಹ್ಲಾದ್ ಮೋದಿ, ಕಳೆದ 13 ವರ್ಷಗಳಲ್ಲಿ ನರೇಂದ್ರ ಮೋದಿಯನ್ನು ಬೆರಳೆಣಿಕೆಯಷ್ಟು ಬಾರಿ ಭೇಟಿಯಾಗಿದ್ದೇನೆ ಎಂದಿದ್ದರು. ಆದ್ರೆ ಅನೇಕ ಬಾರಿ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರಹ್ಲಾದ್ ಮೋದಿ, ನರೇಂದ್ರ ಮೋದಿಯವರ ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲೇ ನರೇಂದ್ರ ಮೋದಿ ಕುಟುಂಬವನ್ನು ತೊರೆದಿದ್ದರು. ಕುಟುಂಬದ ಬೆರಳೆಣಿಕೆ ವ್ಯಕ್ತಿಗಳ ಜೊತೆ ಮಾತ್ರ ಅವ್ರು ಸಂಪರ್ಕದಲ್ಲಿದ್ದಾರೆ. ತಾಯಿ ಹೀರಾ ಬೆನ್ ರನ್ನು ಮಾತ್ರ ಮೋದಿ ಆಗಾಗ ಭೇಟಿಯಾಗ್ತಿರುತ್ತಾರೆ.















