
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸದಾಶಿವನಗರದಲ್ಲಿರುವ ಕೃಷ್ಣ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದ್ರು. ಎಸ್.ಎಂ.ಕೃಷ್ಣ ನಿವಾಸಕ್ಕೆ ಡಿ.ಕೆ.ಎಸ್ ಆಗಮಿಸುತ್ತಿದ್ದಂತೆ ಎದುರಾದ ಸಂಸದ ಪ್ರತಾಪ್ ಸಿಂಹ, ಡಿ.ಕೆ.ಶಿವಕುಮಾರ್ ಕಾಲಿಗೆ ನಮಸ್ಕರಿಸಿದ್ರು. ಪ್ರತಿಯಾಗಿ ಮುಗುಳ್ನಗೆ ಚೆಲ್ಲಿದ ಡಿ.ಕೆ.ಶಿವಕುಮಾರ್, ನಿವಾಸದೊಳಕ್ಕೆ ತೆರಳಿದರು.
ಶುಭಾಶಯ ತಿಳಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ನನ್ನ ತಂದೆ ಸಮಾನರು. ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ನಡೆಸಿಲ್ಲ. ನನ್ನದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನೇ ಮಾತನಾಡುವುದಿದ್ದರೂ ಬಹಿರಂಗವಾಗೇ ಆಡುತ್ತೇನೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ. ಅವರ ಹುಟ್ಟಿದ ಹಬ್ಬಕ್ಕೆ ಶುಭ ಕೋರಲು ಬಂದಿದ್ದೆ ಅಷ್ಟೇ. ಇತ್ತೀಚೆಗೆ ಯುಗಾದಿ ಹಬ್ಬದ ಸಂದರ್ಭದಲ್ಲೂ ಎಸ್.ಎಂ.ಕೃಷ್ಣರನ್ನ ಭೇಟಿ ಮಾಡಿದ್ದೆ. ಈಗ ರಹಸ್ಯ ಮಾತುಕತೆ ಏನೂ ನಡೆಸಿಲ್ಲ ಎಂದರು.
ಇನ್ನು ಜಿ.ಟಿ.ದೇವೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ನಾನು ಈಗ ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ, ಸಚಿವನಷ್ಟೇ. ನನ್ನ ವಿಷಯಕ್ಕೆ ಮಾತ್ರ ನಾನು ಪ್ರತಿಕ್ರಿಯೆ ನೀಡಬಲ್ಲೆ. ಬೇರೆಯವರ ವಿಷಯಗಳಿಗೆಲ್ಲಾ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದರು.















