
ಬಂಟ್ವಾಳ: ಸಾಧನೆಗೆ ಯಾವ ಕೊರತೆಯೂ ಅಡ್ಡಿಯಾಗಲಾರದು ಎಂಬುವುದು ಆಗಾಗ ಸತ್ಯವಾಗುತ್ತಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿಶಿಷ್ಟ ಚೇತನ ವಿದ್ಯಾರ್ಥಿಯೋರ್ವಳು ವಿಶೇಷ ಸಾಧನೆ ಮಾಡಿದ್ದಾಳೆ. ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ನಿವಾಸಿ ತಿಮ್ಮಪ್ಪ ಮೂಲ್ಯ ಮತ್ತು ಯಶೋದಾ ದಂಪತಿಯ ಪುತ್ರಿ ಯಶಸ್ವಿ ವಿಶೇಷ ಸಾಧನೆ ಮಾಡಿದ ಪ್ರತಿಭೆ. ಈಕೆ ಕಡೇಶ್ವಾಲ್ಯ ಪ್ರೌಢಶಾಲೆಯಲ್ಲಿ ಓದುತ್ತಿದ್ದು 576 ಅಂಕಗಳಿಸಿ ತೇರ್ಗಡೆಗೊಂಡಿದ್ದಾಳೆ. ಈಕೆ ವಾಕ್ ಶ್ರವಣ ಶಕ್ತಿ ಇಲ್ಲದೆ ಸಾಧನೆ ಮಾಡಿದ ಪ್ರತಿಭಾನ್ವಿತೆ. ಕಲಿಯುವುದರಲ್ಲಿ ಮುಂದಿರುವ ಈಕೆ ಚೆಸ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂದು ಸಾಬೀತು ಮಾಡಿದ್ದಾಳೆ.

























