
ಧಾರವಾಡ: ಕಾರು ತಪಾಸಣೆ ವೇಳೆ ಸಂಚಾರಿ ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ದಂಪತಿ ರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿ-ಧಾರವಾಡ ಬೈ ಪಾಸ್ ರಸ್ತೆಯಲ್ಲಿ ನಿನ್ನೆ ನಡೆದಿದೆ ಎನ್ನಲಾಗಿರುವ ಈ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಗೆ ಸೇರಿದ ಚಾಲುಕ್ಯ ವಾಹನವನ್ನ ದಂಪತಿ ಅಡ್ಡಗಟ್ಟಿದ್ದಾರೆ. ಅಲ್ಲದೇ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸ್ ವಾಹನದಲ್ಲಿ ಕುಳಿತಿದ್ದ ವ್ಯಕ್ತಿ ಕೆಳಗೆ ಇಳಿದು, ಪೊಲೀಸರೊಂದಿಗೆ ದಂಪತಿಯನ್ನ ಸಮಾಧಾನಿಸಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಇಬ್ಬರೂ ಮಗುವಿನೊಂದಿಗೆ ಮಧ್ಯ ರಸ್ತೆಯಲ್ಲೇ ಕೂತು ಪ್ರತಿಭಟನೆ ನಡೆಸಿದ್ದಾರೆ.
ಸರಿಯಾದ ದಾಖಲೆ ತೋರಿಸಿದ ಮೇಲೂ ಪೊಲೀಸ್ ಸಿಬ್ಬಂದಿ 1 ಸಾವಿರ ರೂ. ಲಂಚ ಕೇಳಿದರೆಂದು ಆರೋಪಿಸಿ ದಂಪತಿ ಪ್ರತಿಭಟಿಸಿದ್ದಾರೆ ಎನ್ನಲಾಗಿದೆ. ಪೊಲೀಸರೊಂದಿಗೆ ಖಾಸಗಿ ವ್ಯಕ್ತಿ ಕೂಡಾ ವಸೂಲಿ ಮಾಡುತ್ತಿದ್ದಾರೆ. ವಾಹನದಲ್ಲೇ ಕೂರಿಸಿಕೊಂಡು ಪೊಲೀಸರು ಆತನನ್ನು ತಿರುಗಾಡುತ್ತಾರೆ ಎಂದು ದಂಪತಿ ಆರೋಪಿಸಿದ್ದಾರೆ.
ವಿಡಿಯೋ ನೋಡಿದ ಜನರು ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ಸಿಬ್ಬಂದಿ ಹಾಗೂ ದಂಪತಿ ಯಾರು ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಸಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗುತ್ತಿದೆ.















