
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರು ಇಂದು (ಮೇ 1) 87ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.
ಎಸ್.ಎಂ. ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
1932ರ ಮೇ 1ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ ಎಸ್ಎಂ ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿದ್ದ ಅವರು, 2017ರ ಜನವರಿಯಲ್ಲಿ ಕಾಂಗ್ರೆಸ್ ತೊರೆದು ಮಾರ್ಚ್ ತಿಂಗಳಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಅಧಿಕಾರಕ್ಕೆ ಬಿಜೆಪಿಗೆ ಬಂದಿಲ್ಲ, ವಂಶಪಾರಂಪರ್ಯ ಆಡಳಿತ ಬೇಡವಾಗಿತ್ತು: ಎಸ್‍ಎಂ ಕೃಷ್ಣ
ಬಿಜೆಪಿಯಲ್ಲಿ ಯಾವುದೇ ಅಧಿಕೃತ ಹುದ್ದೆ ಪಡೆದುಕೊಳ್ಳದೆ ಇದ್ದರೂ ಅವರು ಪಕ್ಷದ ಕೆಲವು ಸಮಾರಂಭಗಳಲ್ಲಿ ಹಾಜರಾಗುತ್ತಿದ್ದಾರೆ. ಅವರ ಜನ್ಮದಿನಕ್ಕೆ ಪಕ್ಷಭೇದ ಮರೆತು ರಾಜಕಾರಣಿಗಳು, ಉದ್ಯಮಿಗಳು, ಕಲಾವಿದರು ಮತ್ತು ಜನಸಾಮಾನ್ಯರು ಶುಭಾಶಯಗಳನ್ನು ಕೋರಿದ್ದಾರೆ. ಫೇಸ್‍ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಅವರಿಗೆ ಶುಭ ಹಾರೈಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಂತಾದವರು ಶುಭಾಶಯಗಳನ್ನ ಹಂಚಿಕೊಂಡಿದ್ದಾರೆ.















