
ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಉನ್ನತಸ್ಧಾನಕ್ಕೆ ಹೋಗಬೇಕೆಂಬ ಹಂಬಲ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಹಣಗಳಿಸಬೇಕೆಂಬ ಆತನ ಉದ್ದೇಶ ಅಪರಾಧವಲ್ಲ. ಆದರೆ ಗಳಿಸಿದ ಹಣವನ್ನು ಹೇಗೆ ಬಳಸುತ್ತಾನೆ ಎನ್ನುವುದು ಮುಖ್ಯ. ಧನಾತ್ಮಕ ವ್ಯಕಿಗಳ ಕೈಗೆ ಹಣ ಸಿಕ್ಕಿದರೆ ಒಳ್ಳೆಯ ಕೆಲಸಕ್ಕೆ ಹಣ ವ್ಯಯ ಆಗುತ್ತದೆ. ಆ ಮೂಲಕ ದೇಶದ ಅಭಿವೃದ್ಧಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಪುತ್ತೂರಿನ ವೆಲ್ತ್ ವಿಷನ್ ಗ್ರೂಪಿನ ನಿರ್ದೇಶಕ ಮುರಳೀಧರ ಕೆ. ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಯೋಜಿಸಿದ್ದ ‘ಶೇರು ಮಾರುಕಟ್ಟೆ ವಹಿವಾಟು’ ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಗುರುವಾರ ಮಾಡಿದರು.
ವಿದ್ಯಾರ್ಥಿಗಳು ಎಲ್ಲಾ ತರಹದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಹೊಸತನ್ನು ಅನ್ವೇಶಿಸುವ ಗುಣ ನಮ್ಮಲ್ಲಿರಬೇಕು. ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡರೆ ಸಮೃದ್ಧ ಜೀವನ ನಮ್ಮದಾಗುತ್ತದೆ ಎಂದು ನುಡಿದರು.
ಹಣವೇ ಎಲ್ಲಾ ಅನ್ನುವ ಮನೋಭಾವವನ್ನು ಬಿಡಬೇಕು. ವ್ಯವಹಾರದಲ್ಲಿ ವ್ಯರ್ಥ ಬಂಡವಾಳದ ಬಗ್ಗೆ ಜಾಗೃತಿವಹಿಸಬೇಕು. ಎಲ್ಲಾ ಸಾಧನೆಗಾಗಿ ನಮ್ಮ ಆರೋಗ್ಯ ಮುಖ್ಯ. ಬಲಿಷ್ಟರಾಗಿ ದೇಶವನ್ನು ಧೃಡವನ್ನಾಗಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಆನಂದ ರಾಥಿ ಗ್ರೂಪ್‍ನ ಸಹಾಯಕ ಉಪಾಧ್ಯಕ್ಷ ಶ್ರೀಧರ್ ಜಿ.ಎನ್. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಮ್ಮ ತಪ್ಪುಗಳನ್ನು ತಿದ್ದುವುದಕ್ಕೆ ಗುರುಗಳಿರುತ್ತಾರೆ. ಆದರೆ ಆರ್ಥಿಕ ವಿಷಯದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಗೂ ದೊಡ್ಡ ದಂಡ ತೆರಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಬಗ್ಗೆ ಎಚ್ಚರವಹಿಸಬೇಕು. ತಾವು ಕಲಿತ ಅಂಶಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಬಳಸಬೇಕು ಎಂದು ಹೇಳಿದರು.
ರಾಷ್ಟ್ರದ ಆರ್ಥಿಕತೆ ಒಂದು ಟ್ರಿಲಿಯನ್ ತಲುಪಲು 65 ವರ್ಷಗಳು ಬೇಕಾದವು. ಕಳೆದ 7 ವರ್ಷದಲ್ಲಿ ರಾಷ್ಟ್ರದ ಆರ್ಥಿಕತೆ 3 ಟ್ರಿಲಿಯನ್ ದಾಟಿದೆ. ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್ ದಾಟಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದರಿಂದಾಗುವ ಉಪಯೋಗಗಳನ್ನು ನಾವೆಲ್ಲರು ಪಡೆಯಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಜೀವನದಲ್ಲಿ ಆರ್ಥಿಕ ಯೋಜನೆ ಬಹಳ ಮಹತ್ತರದ ಪಾತ್ರ ವಹಿಸುತ್ತದೆ. ವೃತ್ತಿ ಜೀವನಕ್ಕೆ ಕಾಲಿಡುವ ಮುನ್ನ ಎಲ್ಲರೂ ಆರ್ಥಿಕತೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರೆ ಜೀವನ ಸುಖಕರವಾಗಿರುತ್ತದೆ. ಹಲವಾರು ತಜ್ಞರು ಬಂಡವಾಳ ಹೂಡಿಕೆ ಮತ್ತು ಆರ್ಥಿಕತೆಯ ಕುರಿತಾಗಿ ಹಲವಾರು ಪ್ರಮುಖ ಸಂಗತಿಗಳನ್ನು ತಿಳಿಸಿದ್ದಾರೆ. ಅದನ್ನು ಅರಿತು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಆನಂದ ರಾಥಿ ಗ್ರೂಪ್‍ನ ಸೀನಿಯರ್ ಮ್ಯಾನೇಜರ್ ರವಿ.ಎಂ. ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಸ್ವಾಗತಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಿ. ಭಟ್ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.















