ವಿವೇಕಾನಂದ ಕಾಲೇಜು: ಉಪನ್ಯಾಸ ಕಾರ್ಯಕ್ರಮ: ಕಥೆ- ವ್ಯಥೆ, ಚಿಂತನೆಗಳ ಸಾರವೇ ಗಾದೆ: ಪ್ರೊ.ವಿ.ಬಿ. ಅರ್ತಿಕಜೆ – ಕಹಳೆ ನ್ಯೂಸ್

ಪುತ್ತೂರು: ಗಾದೆಗಳ ಹಿಂದೆ ಇರುವ ಕಥೆಗಳನ್ನು ತಿಳಿದುಕೊಳ್ಳಬೇಕು. ಗಾದೆಗಳು ಸತ್ಯಾಂಶ, ನೈಜತೆ, ಕಥೆ-ವ್ಯಥೆಗಳ ಮೂಲಕ ಚಿಂತನೆಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಪ್ರೊ. ವಿ.ಬಿ. ಅರ್ತಿಕಜೆ ಹೇಳಿದರು.
ವಿವೇಕಾನಂದ ಕಾಲೇಜಿನ ಪಾರಂಪರಿಕ ಕೂಟ ಮತ್ತು ತುಳು ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾದೆಗಳನ್ನು ನಾವು ತಲತಲಾಂತರದಿಂದ ಹಿರಿಯ ಮೂಲಕ ಕೇಳುತ್ತಾ-ಹೇಳುತ್ತಾ ಬಂದಿದ್ದೇವೆ. ಇದು ಜಾನಪದೀಯ ಸೊಗಡೂ ಆಗಿದೆ.
ಯಾವುದೇ ಒಂದು ವಿಷಯಗಳ ಬಗ್ಗೆ ತಿಳಿಯಬೇಕಾದರೆ ಒಂದು ಗಂಟೆಗಿಂತಲು ಹೆಚ್ಚು ಸಮಯಬೇಕಾಗುತ್ತದೆ. ಆದರೆ ಗಾದೆಗಳಿಂದ ಕಥೆಗಳನ್ನು ವೇಗವಾಗಿ ಅರ್ಥ ಮಾಡಿಕೊಳ್ಳಬಹುದು. ಅದೇ ಗಾದೆಯ ವಿಶೇಷತೆ. ನೂರು ಗಾದೆಗಳನ್ನು ಓದಿದರೆ ಒಂದು ಗಾದೆಯನ್ನು ರಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಬಳಿಕ ಗಾದೆಗಳ ಮಹತ್ವ ಮತ್ತು ಅದರಲ್ಲಿರುವ ಕಥೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ತುಳು ಸಂಘದ ಅಧ್ಯಕ್ಷ ರೋಹಿತ್ ಹಾಗೂ ಕಾರ್ಯದರ್ಶಿ ಉಷಾ ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕ ಮತ್ತು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವಿಷ್ಣು ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.















