
ಪುತ್ತೂರು: ಹೊಸತನದೆಡೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮತ್ತು ಕ್ರಿಯಾಶೀಲವಾಗಿರಲು ಪತ್ರಿಕೋದ್ಯಮ ಕ್ಷೇತ್ರ ಸಹಾಯಕ. ಇಲ್ಲಿ ಹೊಸತನದೆಡೆಗೆ ಹೆಜ್ಜೆ ಹಾಕಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಅಂತೆಯೇ ಒಂದು ವಿಷಯದ ಕುರಿತು ಅಧ್ಯಯನ ಮಾಡುವಾಗ ಅದೇ ವಿಷಯದಲ್ಲಿ ನಮಗೆ ಪ್ರತ್ಯೇಕ 100 ನುಡಿಚಿತ್ರ ಅಥವಾ ಲೇಖನವನ್ನು ಬರೆಯಬಹುದು. ಏಕೆಂದರೆ, ನಾವು ಬರೆಯುವ ಪ್ರತೀ ಅಕ್ಷರಕ್ಕೂ ಇಲ್ಲಿ ಬೆಲೆಯಿದೆ.
ಈ ಕ್ಷೇತ್ರದಲ್ಲಿ ವಿಮರ್ಶಾತ್ಮಕತೆಯೆಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆರಿಸಿಕೊಂಡ ವಿಷಯದ ಕುರಿತು ಆಳವಾದ ಅಧ್ಯಯನ ನಡೆಸುವುದು ಉತ್ತಮ ಎಂದು ನಿರಂತರ ಮಾಸ ಪತ್ರಿಕೆಯ ಸಂಪಾದಕ ಚಂದ್ರಹಾಸ ಚಾರ್ಮಾಡಿ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮವು ಕೃಷಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇಲ್ಲಿ ಕೃಷಿಯ ಪರಿಣಿತ ಅಂದರೆ ಸಾಧಕರನ್ನು ಅವರು ಎದುರಿಸಿದ ಸವಾಲುಗಳನ್ನು ನುಡಿಚಿತ್ರದ ಮೂಲಕ ಪ್ರಕಟಗೊಳಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಕೃಷಿ ಲೇಖನವನ್ನು ಬರೆಯುವಾತ ಅಂದರೆ ಲೇಖಕ ಕೃಷಿ ಬಗೆಗೆ ಮೊದಲೇ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಅಥವಾ ಆತನೂ ಅನುಭವಿಯಾಗಿದ್ದರೆ ಉತ್ತಮ. ಹಾಗಾದಾಗ, ಪ್ರಕಟವಾಗುವ ಲೇಖನದಲ್ಲೂ ನಿಖರವಾದ ಮಾಹಿತಿಯನ್ನು ಕಾಣಬಹುದು. ಅಧ್ಯಯನದ ದೃಷ್ಟಿಯಲ್ಲೂ ಇದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರಾಧಿಕಾ ಕಾನತ್ತಡ್ಕ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯಾ ನಿಡ್ಪಳ್ಳಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಕ್ಷಯ್‍ಕುಮಾರ್ ಪಲ್ಲಮಜಲು ನಿರ್ವಹಿಸಿದರು.













