
ಪುತ್ತೂರು: ಕವನ ರಚಿಸುವ ಕಲೆ ರಕ್ತಗತವಾಗಿ ಪಡೆಯುವಂತಹದ್ದಲ್ಲ. ಬದಲಿಗೆ ಒಳ್ಳೆಯ ಅಧ್ಯಯನ, ನಿರಂತರ ಬರವಣಿಗೆಯಿಂದ ಸಿದ್ಧಿಸುವಂತದ್ದು. ಕವನ ರಚಿಸಲು ಉತ್ತಮ ಪದಪಟ್ಟಿ ಹಾಗು ತಾಳ್ಮೆ ಅತ್ಯವಶ್ಯಕ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟರಮಣ ಭಟ್ ಹೇಳಿದರು.
ಅವರು ಪುತ್ತೂರಿನ ಕಾಲೇಜಿನ ಆಂಗ್ಲ ವಿಭಾಗ ವಿವಿಧ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಬರೆಸಿದ ಕವನಗಳ ಸಂಕಲನ ‘ಸೈಲೆಂಟ್ ವಾಯ್ಸ್’ ಅನ್ನು ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದರು.
ಕೆಲವೊಮ್ಮೆ ಏಕಾಂತತೆ ಕವನ ರಚನೆಗೆ ಸ್ಫೂರ್ತಿಯಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಜೀವನದ ಜಂಜಾಟಗಳು, ಅನುಭವಿಸಿದ ನೋವು, ಯಾತನೆಯೇ ಪ್ರೇರಣೆಯಾಗುತ್ತದೆ. ಕವನ ರಚನೆಗೆ ನಿರ್ದಿಷ್ಟವಾದ ವಸ್ತುವೇ ಆಗಬೇಕೆಂದೇನಿಲ್ಲ. ಯಾವ ವಿಷಯವನ್ನಾದರೂ ವಸ್ತುವನ್ನಾಗಿರಿಸಿಕೊಂಡು ಕವನ ರಚನೆ ಮಾಡಬಹುದು.
ವಿದ್ಯಾರ್ಥಿಗಳೇ ಶ್ರಮವಹಿಸಿ ರಚಿಸಿರುವ ‘ಸೈಲೆಂಟ್ ವಾಯ್ಸಸ್’ ಕವನ ಸಂಕಲನ ನಿಜಕ್ಕೂ ಒಂದು ಉತ್ತಮ ಪ್ರಯತ್ನ. ಇದೇ ರೀತಿಯ ಪ್ರಯತ್ನಗಳು ನಿರಂತರವಾಗಿ ಸಾಗಲಿ ಎಂದು ವಿದ್ಯಾರ್ಥಿಗಳಿಗೂ, ಆಂಗ್ಲ ವಿಭಾಗಕ್ಕೂ ಶುಭ ಹಾರೈಸಿದರು.
ಕರ‍್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೊಸಮನೆ ಮಾತನಾಡಿ ‘ಸೈಲೆಂಟ್ ‘ಸೈಲೆಂಟ್ ವಾಯ್ಸ್’ ಕವನ ಸಂಕಲನ ವಿಭಾಗದಲ್ಲಿ ನಡೆದ ಒಂದು ನೂತನ ಪ್ರಯತ್ನ. ಸ್ವತಃ ವಿದ್ಯಾರ್ಥಿಗಳೇ ರಚಿಸಿರುವ ಕವನಗಳನ್ನು ತಿದ್ದಿ ಸಂಪಾದಿಸುವಲ್ಲಿ ವಿಭಾಗದ ಉಪನ್ಯಾಸಕರ ಪಾತ್ರ ಶ್ಲಾಘನೀಯ ಎಂದರು.
‘ಸೈಲೆಂಟ್ ವಾಯ್ಸ್’ ಪುಸ್ತಕದ ಸಂಪಾದಕಿಯಾದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ಮೋತಿ ಬಾೈ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳ ಶ್ರಮದ ಫಲವಾಗಿ ಇಂದು ಈ ಪುಸ್ತಕ ಬಿಡುಗಡೆಯ ಹಂತಕ್ಕೆ ಬಂದಿದೆ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷೀಯ ನುಡಿಗಳನ್ನಾಡಿ ವಿಭಾಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಕರ‍್ಯದರ್ಶಿಯಾದ ಸಂಕೇತ್ ಕುಮಾರ್ ಮತ್ತು ವಿದ್ಯಾರ್ಥಿನಿ ಯಶಸ್ವಿನಿ ಬಿ ಆರ್ ತಮ್ಮ ಅನುಭವಗಳನ್ನ ಹಂಚಿಕೊಂಡರು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಅಂಗ್ಲ ವಿಭಾಗದ ಉಪನ್ಯಾಸಕಿಯರಾದ ಅಂಬಿಕಾ ಹಾಗು ಸುಕನ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಘ ಮತ್ತು ಚೈತ್ರ ಪ್ರಾರ್ಥಿಸಿ, ಪರೀಕ್ಷಾ ರೈ ಸ್ವಾಗತಿಸಿ, ಸುಶ್ಮಿತಾ ವಂದಿಸಿ, ವಿದ್ಯಾರ್ಥಿನಿ ಆಶಾದೇವಿ ಕಾರ‍್ಯಕ್ರಮ ನಿರೂಪಿಸಿದರು.














