
ಚಾಮರಾಜನಗರ: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಸರ್ಕಾರ ಪರಿಹಾರ ಕಾಮಗಾರಿಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಸರ್ಕಾರ ಇದ್ದರೂ ಜನರ ಪಾಲಿಗೆ ಸತ್ತಂತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು.
ತಾಲ್ಲೂಕಿನ ಬದನಗುಪ್ಪೆ, ಮುತ್ತಿಗೆ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಬರ ನಿರ್ವಹಣೆ ಕಾರ್ಯಪಡೆಗೆ ತಲಾ 50 ಲಕ್ಷ ಬಿಡುಗಡೆ ಆಗಿರುವುದು ಹೊರತುಪಡಿಸಿ ಬೇರೆ ಹಣ ಬಿಡುಗಡೆಯಾಗಿಲ್ಲ. ಈ ವೇಳೆಗಾಗಲೇ ಬರ ಎದುರಿಸಲು ಸಿದ್ಧತೆಗಳು ಆಗಬೇಕಿತ್ತು. ಆದರೆ, ಏನೂ ಆಗಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ 4 ತಂಡಗಳು ಬರಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಅಧ್ಯಯನ ನಡೆಸುತ್ತಿವೆ. ನಾನು 8-10 ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಇನ್ನು 10 ರಿಂದ 12 ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿದ್ದೇವೆ. ಬರಪೀಡಿತ ಸ್ಥಳಗಳಲ್ಲಿ ಕಂಡಿದ್ದನ್ನು ವರದಿ ರೂಪದಲ್ಲಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.














