
ಪುತ್ತೂರು: ಬಿಸಿರೋಡ್ ಅಡ್ಡಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಹತ್ತು ದಿನಗಳೊಳಗೆ ಕಾಮಗಾರಿ ಅಭಿವೃದ್ಧಿ ಆರಂಭವಾಗಲಿದ್ದು, ಮಳೆಗಾಲದ ಬಳಿಕ ಕಾಮಗಾರಿಯ ವೇಗ ಹೆಚ್ಚಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರ ಪಾದಯಾತ್ರೆ ಕೇವಲ ರಾಜಕೀಯ ನಾಟಕ ಎಂದು ಟೀಕಿಸಿದರು. ರಾಜ್ಯ ಸರ್ಕಾರವು ಸಕಾಲದಲ್ಲಿ ಭೂ ಸ್ವಾಧೀನತಾ ಪ್ರಕ್ರಿಯೆಯನ್ನು ಮಾಡಿ ಕೊಡದ ಹಿನ್ನೆಲೆಯಲ್ಲಿ ಬಿಸಿ ರೋಡ್-ಅಡ್ಡಹೊಳೆ ಚತುಷ್ಪದ ಕಾಮಗಾರಿಗೆ ಅಡ್ಡಿಯಾಗಿತ್ತು.
ಈ ವಿಚಾರ ಕಾಂಗ್ರೆಸ್‌ಗೆ ಗೊತ್ತಿತ್ತು. ನಿರ್ಮಾಣ ಗುತ್ತಿಗೆದಾರ ಸಂಸ್ಥೆಯಿಂದ ಕಾಂಗ್ರೆಸ್‌ನವರು ಹಣ ಪಡೆದು ನೆಲ್ಯಾಡಿಯಿಂದ ಬಿಸಿ ರೋಡ್‌ವರೆಗೆ ಪಾದಯಾತ್ರೆ ಮಾಡಿದ್ದಾರೆ ಎಂದರು.
15 ಕಡೆ ಭೂ ಸ್ವಾಧೀನತೆಯನ್ನು ಸರಕಾರ ಮಾಡಿ ಕೊಟ್ಟಿಲ್ಲ. ಈ ಕಾರಣದಿಂದ 20 ಕಿ.ಮೀ ಕಾಮಗಾರಿಗೆ ತೊಂದರೆಯಾಗಿತ್ತು. ಇದೀಗ ಗುತ್ತಿಗೆದಾರ ಸಂಸ್ಥೆಯವರು ಈಗಾಗಲೇ ಕಾಮಗಾರಿ ಆರಂಭಿಸಿದ್ದಾರೆ. ಮೊದಲ ಹಂತದಲ್ಲಿ ಮೋರಿಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಗುತ್ತಿಗೆದಾರ ಸಂಸ್ಥೆಯ ರಸ್ತೆ ನಿರ್ಮಾಣ ಕಾಮಗಾರಿಯ ಯಂತ್ರೋಪಕರಣಗಳು ಆಗಮಿಸಿದ್ದು, 10 ದಿನದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾ.ಪಂ ಸದಸ್ಯ ಸಾಜಾ ರಾಧಾಕೃಷ್ಣ ಆಳ್ವ, ಆರ್.ಸಿ ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.














