ರಾಜ್ಯ ಬಜೆಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ 6) ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ ರಾಜ್ಯದ ನಿರುದ್ಯೋಗಿ ಯುವಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಬರೋಬ್ಬರಿ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಮೂಲಕ ಆಡಳಿತ ಯಂತ್ರವನ್ನು ಬಲಪಡಿಸುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಸರ್ಕಾರವು ವಯೋಮಿತಿಯಲ್ಲಿ 5 ವರ್ಷಗಳ ಕಾಲ ಸಡಿಲಿಕೆ ನೀಡಿರುವುದು ವಿಶೇಷವಾಗಿದೆ.
ಕಳೆದ ಕೆಲ ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿದ್ದ ಮತ್ತು ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ಈ ನಿರ್ಧಾರವು ದೊಡ್ಡ ಆಸರೆಯಾಗಲಿದೆ. ಈ ನೇಮಕಾತಿ ಯೋಜನೆಯು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಹೇಳಲಾಗುತ್ತಿದೆ.













