ಪುತ್ತೂರು ಮಹಿಳಾ ಕಾಲೇಜು: ಮೂಲಭೂತ ಸಮಸ್ಯೆ ಬಗೆಹರಿಸಲಾಗದ ಶಾಸಕ ಅಶೋಕ್ ರೈ ಅವರಿಂದ ಪ್ರಾಂಶುಪಾಲರ ಅಮಾನತಿನ ‘ಒಣ ಪ್ರತಿಷ್ಠೆ’ : ಶಾಸಕ ಕಿಶೋರ್ ಕುಮಾರ್ ಆಕ್ರೋಶ – ಕಹಳೆ ನ್ಯೂಸ್

ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಿಪರೀತ ಧೂಳಿನ ಸಮಸ್ಯೆಯಿಂದ ಬೇಸತ್ತು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ವೇದಶ್ರೀ ನಿಡ್ಯಾ ಅವರನ್ನು ಅಮಾನತು ಮಾಡಿಸಿರುವ ಪುತ್ತೂರು ಶಾಸಕ ಅಶೋಕ್ ರೈ ಅವರ ದ್ವೇಷದ ರಾಜಕಾರಣವನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಉಗ್ರವಾಗಿ ಖಂಡಿಸಿದ್ದಾರೆ. ವಿದ್ಯಾರ್ಥಿನಿಯರ ಹಿತಾಸಕ್ತಿಗೆ ಸ್ಪಂದಿಸಿದ ಪ್ರಾಮಾಣಿಕ ಅಧಿಕಾರಿಯನ್ನು ಬಲಿಪಶು ಮಾಡುವ ಬದಲು, ನಿಯಮ ಉಲ್ಲಂಘಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಶಾಸಕರಿಗಿಲ್ಲವೇ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಹಳೆ ಜೈಲು ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾಲೇಜಿನ ಸಮಸ್ಯೆ ಕೇವಲ ಧೂಳಿನದ್ದಲ್ಲ. ಐನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕನಿಷ್ಠ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ತರಗತಿ ಕೋಣೆಗಳ ಕೊರತೆಯಿದ್ದು, ಡಿಜಿಟಲ್ ಕ್ಲಾಸ್, ಪ್ರೊಜೆಕ್ಟರ್ ಇದ್ದರೂ ಬಳಸಲು ಜಾಗವಿಲ್ಲದ ಸ್ಥಿತಿ ಇದೆ. ಜೈಲಿನ ಹಳೆ ಕಟ್ಟಡವಾಗಿರುವುದರಿಂದ ಕೋಣೆಗಳಲ್ಲಿ ಕತ್ತಲಿದ್ದು, ಫ್ಯಾನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜೊತೆಗೆ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ ಮತ್ತು ಕಲಾ, ವಾಣಿಜ್ಯ, ಹಿಂದಿ, ಇಂಗ್ಲಿಷ್ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ತೀವ್ರ ಕೊರತೆ ಇದೆ. ಇಂತಹ ವಾಸ್ತವಿಕ ಸಮಸ್ಯೆಗಳನ್ನು ಮರೆಮಾಚಿ, ಸಮೀಪದಲ್ಲಿ ಕಾಮಗಾರಿ ನಡೆಸುವಾಗ ಧೂಳು ನಿಯಂತ್ರಣ ಮಾಡದ ಗುತ್ತಿಗೆದಾರರಿಗೆ ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಶಾಸಕರು ಮೃದು ಧೋರಣೆ ತಳೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಮುಂದೆ ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರನ್ನು ಅಮಾನತು ಮಾಡಿಸಿರುವುದು ಶಾಸಕರ ಆಡಳಿತ ವೈಫಲ್ಯ ಹಾಗೂ ‘ಒಣ ಪ್ರತಿಷ್ಠೆ’ಯನ್ನು ಎತ್ತಿ ತೋರಿಸುತ್ತದೆ.
ಯಾವುದೇ ವಿಚಾರಣೆಯಿಲ್ಲದೆ ಏಕಾಏಕಿ ಮಾಡಲಾಗಿರುವ ಪ್ರಭಾರ ಪ್ರಾಂಶುಪಾಲರ ಅಮಾನತು ಆದೇಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಇದರೊಂದಿಗೆ ಮಹಿಳಾ ಕಾಲೇಜಿಗೆ ತುರ್ತಾಗಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಗಾಳಿ-ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕೇ ಹೊರತು, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದವರ ಧ್ವನಿ ಅಡಗಿಸುವ ಸರ್ವಾಧಿಕಾರಿ ಧೋರಣೆ ಅನುಸರಿಸಬಾರದು. ಒಂದು ವೇಳೆ ಪ್ರಾಂಶುಪಾಲರ ಅಮಾನತು ಹಿಂಪಡೆಯದಿದ್ದರೆ ಮತ್ತು ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಒದಗಿಸದಿದ್ದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಕಿಶೋರ್ ಕುಮಾರ್ ಸರ್ಕಾರಕ್ಕೆ ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.













