ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್ ಮಾರಾಟ ಕಡ್ಡಾಯ-ಕಹಳೆನ್ಯೂಸ್
ನವದೆಹಲಿ: ಏಪ್ರಿಲ್ 1 ರಿಂದ ದೇಶದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ಗಳು ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶ ಪ್ರಕಟಿಸಿದೆ.
RON 95 ಪೆಟ್ರೋಲ್ ಅನ್ನು ಸಾಮಾನ್ಯವಾಗಿ ಆಧುನಿಕ ಉನ್ನತ-ಕಾರ್ಯಕ್ಷಮತೆಯ ಎಂಜಿನ್ಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ಸ್ವಚ್ಛವಾಗಿ ಉರಿಯುತ್ತವೆ, ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30-44% ವರೆಗೆ ಕಡಿಮೆ ಮಾಡುತ್ತದೆ.
ಎಥೆನಾಲ್ ಬಳಕೆ ಶುರುವಾಗಿದ್ದು 90ರ ದಶಕದಲ್ಲಿ. ಅಮೆರಿಕ ತೈಲದಲ್ಲಿ ಎಥೆನಾಲ್ ಬಳಕೆಯನ್ನು ಮೊದಲು ಪರಿಚಯಿಸಿತು. ಆರಂಭದಲ್ಲಿ ಅಷ್ಟೊಂದು ಯಶಸ್ಸು ಸಿಗದಿದ್ದರೂ ಎಥೆನಾಲ್ ಬಳಕೆಯ ಪ್ರಯೋಜನ ಅರಿಯಲು ಸಹಾಯಕವಾಯಿತು. ಸದ್ಯ ಅಮೆರಿಕ ಶೇ.10ರಷ್ಟು ಎಥೆನಾಲ್ ಬಳಸುತ್ತಿದೆ. ಬ್ರೆಜಿಲ್ನಲ್ಲಿ ಇ-27, ಫ್ರಾನ್ಸ್ ಇ-10, ಜರ್ಮನಿ ಇ-5 ಪೆಟ್ರೋಲ್ ಬಳಸಲಾಗುತ್ತಿದೆ. ಅದರಲ್ಲೂ ಯುರೋಪಿನ ಸ್ವೀಡನ್ ಇ 85 ಇಂಧನ ಬಳಕೆ ಮಾಡುತ್ತಿದೆ.
ಈಗ ಭಾರತಲ್ಲಿ ಇ20 ಪೆಟ್ರೋಲ್ ಸಿಗುತ್ತಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಇ-27 ಪೆಟ್ರೋಲ್ ಸಿಗುವ ಸಾಧ್ಯತೆಯಿದೆ. ಅಂದರೆ 27% ಎಥೆನಾಲ್ 77% ಪೆಟ್ರೋಲ್ ಮಿಶ್ರಣ ಇರುವ ಇಂಧನ ಪೆಟ್ರೋಲ್ ಬಂಕ್ಗಳಲ್ಲಿ ಸಿಗಲಿದೆ. ಯಾವಾಗ ಇದು ಜಾರಿಯಾಗಲಿದೆ ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ.
ಭಾರತಕ್ಕೆ ಏನು ಲಾಭ?
ವಾಹನಗಳ ಸಂಚಾರದಿಂದ ವಾಯುಮಾಲಿನ್ಯ ಆಗುತ್ತೆ. ಈ ಕಾರಣಕ್ಕೆ ದೆಹಲಿಯಲ್ಲಿ ಹಿಂದೆ ಸಮ ಮತ್ತು ಬೇಸ ಸಂಖ್ಯೆಗಳು ನೀತಿ ಜಾರಿಗೆ ಬಂದಿತ್ತು. ಆದರೆ ಎಥೆನಾಲ್ ಆಧಾರಿತ ಪೆಟ್ರೋಲ್ ಬಳಕೆ ಮಾಡಿದರೆ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆಗೊಳಿಸುತ್ತದೆ. ಕಬ್ಬು ಆಧಾರಿತ ಎಥೆನಾಲ್ನಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಪೆಟ್ರೋಲ್ಗಿಂತ 65% ರಷ್ಟು ಕಡಿಮೆ ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್ನಿಂದ 50% ರಷ್ಟು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಅಧ್ಯಯನ ಹೇಳಿದೆ.
ಭಾರತಕ್ಕೆ ವಾರ್ಷಿಕ 1,700 ಕೋಟಿ ಲೀಟರ್ ಎಥೆನಾಲ್ ಬೇಕು. 2013 ರಲ್ಲಿ 421 ಕೋಟಿ ಎಥೆನಾಲ್ ಉತ್ಪಾದನೆಯಾಗುತ್ತಿದ್ದರೆ ಈಗ 1810 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿಗೂ ರೂ. ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ.














