
ಜೆರುಸಲೆಮ್: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐತಿಹಾಸಿಕ ಇಸ್ರೇಲ್ ಪ್ರವಾಸದ ವೇಳೆ ಅಲ್ಲಿನ ಸಂಸತ್ತಿನ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 7 ರಂದು ನಡೆದ ಹಮಾಸ್ ದಾಳಿಯನ್ನು ಉಗ್ರರ ರಾಕ್ಷಸ ಕೃತ್ಯ ಅಂತ ಕರೆದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವೆಲ್ಲಾ ಒಂದೇ ಎಂಬ ಖಡಕ್ ಮೆಸೇಜ್ ಪಾಸ್ ಮಾಡಿದ್ದಾರೆ. ನಿಮ್ಮ ನೋವನ್ನು ನಾವು ಅನುಭವಿಸುತ್ತೇವೆ. ನಿಮ್ಮ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಈ ಕ್ಷಣ ಮತ್ತು ಇನ್ನಮುಂದೆಯೂ ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಇಸ್ರೇಲ್‌ನೊಂದಿಗೆ ಭಾರತದ ಸಂಬಂಧ ರಕ್ತ ಮತ್ತು ತ್ಯಾಗದಲ್ಲಿ ಬರೆಯಲ್ಪಟ್ಟಿದೆ. ಭಾರತ ದೇಶ ಅಧಿಕೃತವಾಗಿ ಇಸ್ರೇಲ್ ಅನ್ನು ಒಂದು ರಾಷ್ಟ್ರ ಅಂತ ಗುರುತಿಸಿದ ಅದೇ ದಿನ ನಾನು ಹುಟ್ಟಿದ್ದೆ. ಮೊದಲ ಮಹಾಯುದ್ಧದ ಸಮಯದಲ್ಲಿ, 4,000ಕ್ಕೂ ಹೆಚ್ಚು ಭಾರತೀಯ ಸೈನಿಕರು ಈ ಪ್ರದೇಶದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಸೆಪ್ಟೆಂಬರ್ 1918ರಲ್ಲಿ ಹೈಫಾದಲ್ಲಿ ನಡೆದ ಅಶ್ವಸೈನ್ಯದ ದಾಳಿಯು ಮಿಲಿಟರಿ ಇತಿಹಾಸದಲ್ಲಿ ಒಂದು ಮಹತ್ವದ ಅಧ್ಯಾಯವಾಗಿ ಉಳಿದಿದೆ ಎಂದು ನೆನಪಿಸಿಕೊಂಡರು. ಪ್ರಧಾನಿ ಮೋದಿಯವರ 35 ನಿಮಿಷಗಳ ಭಾಷಣಕ್ಕೆ ಸಂಸತ್ತಿನಲ್ಲಿದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಇನ್ನು ಪ್ರಧಾನಿ ಮೋದಿಯವರಿಗೆ ನೆಸ್ಸೆಟ್‌ನ ಅತ್ಯುನ್ನತ ಗೌರವ ‘ಸ್ಪೀಕರ್ ಆಫ್ ದಿ ನೆಸ್ಸೆಟ್’ ಪದಕವನ್ನು ನೀಡಿ ಗೌರವಿಸಲಾಯಿತು. ಈ ಮೂಲಕ ಈ ಪದಕವನ್ನು ಪಡೆದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದು ನೆಸ್ಸೆಟ್‌ನ ಅತ್ಯುನ್ನತ ಗೌರವವಾಗಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ನಾಯಕತ್ವದ ಮೂಲಕ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಪದಕವನ್ನು ನೀಡಿ ಗೌರವಿಸಲಾಗಿದೆ.
ಮೋದಿ ಸಂಸತ್ತಿಗೆ ಬರುವಾಗಲೇ ಸದಸ್ಯರು ಮೋದಿ ಮೋದಿ ಎಂದು ಘೋಷಣೆ ಕೂಗಿ ಸ್ವಾಗತಿಸಿದ್ದು ವಿಶೇಷ.














