ಕಾಡಾನೆ ಸೆರೆಗೆ ಬಂದಿದ್ದ ಜ್ಯೂನಿಯರ್ ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ -ಕಹಳೆ ನ್ಯೂಸ್

ಚಿಕ್ಕಮಗಳೂರು: ತಾಲೂಕಿನ ಪುರ ಗ್ರಾಮಕ್ಕೆ ನರಹಂತಕ ಕಾಡಾನೆಯನ್ನು ಸೆರೆಹಿಡಿಯಲು ಬಂದಿದ್ದ ಸಾಕಾನೆ ಜ್ಯೂ.ಅರ್ಜುನ ಭಯದಿಂದ ಕಾಡು ಸೇರಿದ ಘಟನೆ ನಡೆದಿದೆ.
ಮದವೇರಿದ ಕಾಡಾನೆ ಜೊತೆ ಕಾದಾಟದಲ್ಲಿ ಜ್ಯೂನಿಯರ್ ಅರ್ಜುನ ಹೆದರಿ ಕಾಡು ಸೇರಿದ್ದ. ಸುಮಾರು ಒಂದು ಗಂಟೆಗಳ ಕಾಲ ಸಾಕಾನೆ ಹುಡುಕುತ್ತಾ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದರು. ಒಂದು ಗಂಟೆ ಬಳಿಕ ಕಾಡಲ್ಲಿ ಸಾಕಾನೆ ಪತ್ತೆಯಾಗಿದೆ.
ಫೆ.16 ರಂದು ಓರ್ವ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಆ ಕಾಡಾನೆ ಸೆರೆಗೆ ಸರ್ಕಾರ ಆದೇಶಿಸಿದೆ. ಗುಂಪಿನಲ್ಲಿ ಮೂರು ಕಾಡಾನೆಗಳಿದ್ದು ಅದರಲ್ಲಿ ಒಂದು ಕಾಡಾನೆಯನ್ನ ಸೆರೆ ಹಿಡಿದು, ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ 7 ಕುಮ್ಕಿ ಆನೆಗಳನ್ನು ಬಳಕೆ ಮಾಡಿಕೊಂಡು ಕಾಡಾನೆ ಸೆರೆ ಹಿಡಿಯಲು ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾಡಾನೆ ದಾಳಿಗೆ ಯಲ್ಲಪ್ಪ ಎಂಬ ಕಾರ್ಮಿಕ ಬಲಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಬಾಳೆಹೊನ್ನೂರು ಅರಣ್ಯ ಇಲಾಖೆ (Forest Department) ಕಚೇರಿ ಮುಂದೆ ಪ್ರತಿಭಟಿಸಿದ್ದರು.














