
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 29,397 ಮಂದಿ ವಿದ್ಯಾರ್ಥಿಗಳು ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 37,337 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಪ್ರೌಢ ಮತ್ತು ಪ.ಪೂ. ಶಿಕ್ಷಣ ಇಲಾಖೆಗಳು ಸಿದ್ಧತೆ ನಡೆಸಿವೆ.
ಮಾ.18 ರಿಂದ ಎ.2ರವರೆಗೆ ಎಸೆಸೆಲ್ಸಿ ಪರೀಕ್ಷೆ ಮತ್ತು ಫೆ.28 ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ. ಜಿಲ್ಲೆಯ 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91 ಪರೀಕ್ಷಾ ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. 22 ಕ್ಲಸ್ಟರ್ ಹಾಗೂ 38 ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
22 ಕ್ಲಸ್ಟರ್ ಗಳಲ್ಲಿ 53 ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಸುಮಾರು 1265 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 91 ಪರೀಕ್ಷಾ ಕೇಂದ್ರಗಳಿದ್ದು, ಪ್ರತೀ ಕೇಂದ್ರಕ್ಕೆ ಓರ್ವ ಕೇಂದ್ರ ಮುಖ್ಯ ಅಧೀಕ್ಷಕರು, ಓರ್ವ ಅಭಿರಕ್ಷಕರು, ಓರ್ವ ಸ್ಥಾನೀಯ ಜಾಗೃತ ದಳದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 350 ಕ್ಕಿಂತ ಹೆಚ್ಚು ಮಕ್ಕಳಿದ್ದ ಕೇಂದ್ರಗಳಿಗೆ ಓರ್ವ ಉಪ ಮುಖ್ಯ ಅಧೀಕ್ಷಕರನ್ನು ನಿಯೋಜಿಸಲಾಗಿದೆ ಎಂದರು.
ಪರೀಕ್ಷಾ ಪ್ರಕ್ರಿಯೆಯ ವೆಬ್ ಕಾಸ್ಟಿಂಗ್ ಕಳೆದ ವರ್ಷದಂತೆ ಈ ವರ್ಷವೂ ವ್ಯವಸ್ಥಿತವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆ ನಡೆಯಲಿದೆ. ವಿಕಲ ಚೇತನ ಮಕ್ಕಳಿಗೆ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ, ಮಂಡಳಿ ನಿಗದಿಪಡಿಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪರೀಕ್ಷೆ ಎದುರಾಗುತ್ತಿದ್ದಂತೆ ವಿದ್ಯಾರ್ಥಿಗಳು ಆತಂಕ, ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಟೆಲಿ ಮಾನಸ ಸಹಾಯವಾಣಿ 14416 ಗೆ ಕರೆಮಾಡಬಹುದು. ಜಿಲ್ಲಾ ಮಟ್ಟದಲ್ಲಿಯೂ ಸಹಾಯವಾಣಿ ತೆರೆಯಲು ಕ್ರಮಕೈಗೊಳ್ಳಲಾಗುತ್ತಿದ್ದು, ತಜ್ಞ ವೈದ್ಯರ ಮೂಲಕ ಕೌನ್ಸಲಿಂಗ್ ನೀಡಲಾವುದು. ಸದ್ಯದಲ್ಲೇ ಈ ಉಪಕ್ರಮ ಜಾರಿಗೆ ತರುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ಸರ್ಕಾರಿ ಕಾಲೇಜುಗಳ 15, ಖಾಸಗಿ ಅನುದಾನಿತ 22 ಮತ್ತು ಖಾಸಗಿ ಅನುದಾನ ರಹಿತ 22 ಸೇರಿದಂತೆ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳ ಸಾಗಾಣಿಕೆಗಾಗಿ ಒಟ್ಟು 16 ಮಾರ್ಗಗಳನ್ನು ಕಲ್ಪಿಸಿದ್ದು, 16 ತಂಡಗಳನ್ನು ನಿಯೋಜಿಸಲಾಗಿದೆ. ತ್ರಿಸದಸ್ಯ ಸಮಿತಿ ನೇಮಕ ಮಾಡಲಾಗಿದೆ. ನಕಲಿ ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಕೆಎಸ್‌ಇಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬಂದಿ ಬಯೋಮೆಟ್ರಿಕ್ ಹಾಜರಾತಿಗೆ ನೋಂದಣಿ ವ್ಯವಸ್ಥೆ ಮಾಡಲಾಗಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 18,559 ಮಂದಿ (ವಿದ್ಯಾರ್ಥಿಗಳು 8983 ಮತ್ತು ವಿದ್ಯಾರ್ಥಿನಿಯರು 9,576) , ರೆಗ್ಯುಲರ್ 18401 (ಗಂ .8,901 ಮತ್ತು ಹೆ. 9,500), ರಿಪೀಟರ್ 158 ಮಂದಿ ವಾಣಿಜ್ಯ ವಿಭಾಗದಲ್ಲಿ 15,054 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು 8,085 ಮತ್ತು ವಿದ್ಯಾರ್ಥಿನಿಯರು 6969ಮಂದಿ. ಖಾಸಗಿ 988 ಮತ್ತು ರಿಪೀಟರ್ 207 ಮಂದಿ ಎಂದು ಡಿಸಿ ದರ್ಶನ್ ಎಚ್.ವಿ. ಮಾಹಿತಿ ನೀಡಿದರು.
ಕಲಾವಿಭಾಗದಲ್ಲಿ 3,724 ಮಂದಿ. ಈ ಪೈಕಿ ವಿದ್ಯಾರ್ಥಿನಿಯರು 2,047 ಮತ್ತು ವಿದ್ಯಾರ್ಥಿಗಳು 1,677, ರೆಗ್ಯುಲರ್ 3,326 ಮಂದಿ , ರಿಪೀಟರ್ 92ಮತ್ತು ಖಾಸಗಿ 306 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿ.ಪಂ.ಸಿಇಒ ನರ್ವಡೆ ವಿನಾಯಕ್ ಕಾರ್ಭಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಡಿಡಿಪಿಯು ರಾಜೇಶ್ವರಿ, ಡಿಡಿಪಿಐ ಶಶಿಧರ್ ಜಿ.ಎಸ್. ಇದ್ದರು.














