Thursday, March 12, 2026
ಸುದ್ದಿ

ಪುತ್ತೂರು: ಐಷಾರಾಮಿ ಥಾರ್ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ಸಾಗಾಟ : ಕೇರಳದ ಮೂವರು ಎಂಡಿಎಂಎ ಕಿಂಗ್‌ಪಿನ್‌ಗಳ ಅರೆಸ್ಟ್, ಲಾಂಗ್ ಕಂಡು ಪೊಲೀಸರೇ ಶಾಕ್..! – ಕಹಳೆ ನ್ಯೂಸ್

ಪುತ್ತೂರು : ಶಾಂತಿಯುತ ಪುತ್ತೂರಿನ ಮಣ್ಣಿನಲ್ಲಿ ಮಾದಕ ಲೋಕದ ಕರಾಳ ನೆರಳು ಚಾಚಲು ಯತ್ನಿಸಿದ್ದ ‘ಸಾವಿನ ವ್ಯಾಪಾರಿಗಳ’ ಸಂಚನ್ನು ಸಂಪ್ಯ ಪೊಲೀಸರು ವಿಫಲಗೊಳಿಸಿದ್ದಾರೆ. ಐಷಾರಾಮಿ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಕಾರಿನಲ್ಲಿ ಹತ್ತಾರು ಯುವಕರ ಬದುಕನ್ನು ಬಲಿಪಡೆಯಬಲ್ಲ ‘ಎಂಡಿಎಂಎ’ ಎಂಬ ವಿಷವನ್ನು ಸಾಗಿಸುತ್ತಿದ್ದ ಕೇರಳ ಮೂಲದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.

ಬಂಧಿತರಿಂದ ಕೇವಲ ಮಾದಕ ವಸ್ತುವಷ್ಟೇ ಅಲ್ಲ, ರಕ್ತ ಹರಿಸಲು ಸಿದ್ಧವಾಗಿದ್ದ ಮಸೆದ ‘ತಲವಾರ್’ ಪತ್ತೆಯಾಗಿದ್ದು, ಡ್ರಗ್ಸ್ ದಂಧೆಯ ಹಿಂದಿರುವ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿನೆಮಾ ಸ್ಟೈಲ್ ಚೇಸಿಂಗ್: ಪೊಲೀಸರನ್ನ ಕಂಡು ಎಸ್ಕೇಪ್ ಆಗಲು ಯತ್ನ!

ಬುಧವಾರ ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆಯ ಎಸ್‌ಐ ಗುಣಪಾಲ ಜಿ. ಮತ್ತು ತಂಡ ಪರ್ಪುಂಜ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ವೇಳೆ ವೇಗವಾಗಿ ಬಂದ ಕೇರಳ ನೋಂದಣಿಯ ಕಪ್ಪು ಥಾರ್ ಕಾರನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರು. ಆದರೆ, ಪೊಲೀಸರನ್ನು ಕಂಡೊಡನೆ ಕಾರಿನಲ್ಲಿದ್ದವರ ಮುಖದಲ್ಲಿ ಆತಂಕ ಮನೆಮಾಡಿತ್ತು. ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಮುಂದಾದ ಆರೋಪಿಗಳನ್ನು ಪೊಲೀಸರು ಹಠ ಬಿಡದೆ ಬೆನ್ನಟ್ಟಿ ಸುತ್ತುವರಿದು ಸೆರೆಹಿಡಿದರು.

ಜಾಹೀರಾತು
ಜಾಹೀರಾತು

 

ಥಾರ್ ಸೀಟಿನ ಅಡಿಯಲ್ಲಿತ್ತು ಮಸೆದ ತಲ್ವಾರ್‌ !

ಬಂಧಿತರಾದ ಮುಹಮ್ಮದ್ ಅಜ್ಮಲ್, ಇಸ್ಮಾಯಿಲ್ ಮತ್ತು ಸಂಶೀರ್ ಅವರನ್ನು ವಶಕ್ಕೆ ಪಡೆದು ಕಾರನ್ನು ತಪಾಸಣೆ ನಡೆಸಿದಾಗ ಪೊಲೀಸರೇ ದಂಗಾಗಿದ್ದಾರೆ. ಚಾಲಕನ ಸೀಟಿನ ಅಡಿಯಲ್ಲಿ ಮಿಂಚುವ ತಲವಾರ್ ಪತ್ತೆಯಾಗಿದೆ! “ಡ್ರಗ್ಸ್ ಡೀಲ್ ಮಾಡುವಾಗ ನಮ್ಮ ರಕ್ಷಣೆಗಾಗಿ ಮತ್ತು ಎದುರಾಳಿಗಳನ್ನು ಹೆದರಿಸಲು ಇದನ್ನು ಇಟ್ಟುಕೊಂಡಿದ್ದೇವೆ” ಎಂದು ಆರೋಪಿ ಇಸ್ಮಾಯಿಲ್ ಒಪ್ಪಿಕೊಂಡಿರುವುದು ಈ ದಂಧೆ ಎಷ್ಟು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿದೆ. ಹಣಕ್ಕಾಗಿ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದಷ್ಟೇ ಅಲ್ಲ, ರಕ್ತಪಾತಕ್ಕೂ ಇವರು ಹೇಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

 

ಲಕ್ಷಾಂತರ ಮೌಲ್ಯದ ಎಂಡಿಎಂಎ ವಶ

ಬಂಧಿತರಿಂದ ಬರೋಬ್ಬರಿ 53.80 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿದ್ದು, ಇಷ್ಟು ದೊಡ್ಡ ಮೊತ್ತದ ಮಾದಕ ವಸ್ತು ಪತ್ತೆಯಾಗಿರುವುದು ಪುತ್ತೂರು ಭಾಗದಲ್ಲಿ ಡ್ರಗ್ಸ್ ಜಾಲದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೃತ್ಯಕ್ಕೆ ಬಳಸಿದ ಮಹೀಂದ್ರಾ ಥಾರ್ ಹಾಗೂ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ NDPS ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿದ್ದಾರೆ.

ಈ ಆರೋಪಿಗಳು ಕೇರಳ ,ಗೋವಾ, ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದು, ಇವರ ವಿರುದ್ಧ ಕೇರಳ ರಾಜ್ಯದ ಕೋಝಿಕೋಡು, ಕಣ್ಣೂರು, ವಯನಾಡ್‍ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲಿನ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದರು.

ಇನ್ನು ಆರೋಪಿಗಳ ಪೈಕಿ ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು ಎಂಬಾತನ ವಿರುದ್ಧ ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಅ.ಕ್ರ: 04/2026 ಕಲಂ 8C, 21(b),NDPS Act 1985 ರ ಪ್ರಕರಣದ ಆರೋಪಿಯಾಗಿರುತ್ತಾನೆ. ಅಜ್ಮಲ್‍ ಸಹಚರನಾದ ಇಸ್ಮಾಯಿಲ್‌ನ ಮೇಲೆ ಕೂಡ ಕೇರಳ ರಾಜ್ಯದ ಕೋಝಿಕೋಡು ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ದಾಖಲಾಗಿರುವುದಾಗಿದೆ.

ಮಾದಕ ಲೋಕದ ವಿಷಜಾಲ: ಪೋಷಕರೇ ಎಚ್ಚರ!

ಕೇರಳದಿಂದ ಪುತ್ತೂರು ಮಾರ್ಗವಾಗಿ ಸಾಗುತ್ತಿದ್ದ ಈ ಮಾದಕ ವಸ್ತು ಯಾರ ಕೈ ಸೇರುತ್ತಿತ್ತು? ಇದರ ಹಿಂದಿರುವ ಅಸಲಿ ಕಿಂಗ್‌ಪಿನ್ ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಬಂದು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ತಿರುಗುವ ಇಂತಹ ದಂಧೆಕೋರರು ನಿಮ್ಮ ಮಕ್ಕಳನ್ನು ಗುರಿಯಾಗಿಸಬಹುದು. ಸಮಾಜವನ್ನು ಗೆದ್ದಲು ಹುಳದಂತೆ ತಿನ್ನುತ್ತಿರುವ ಈ ಡ್ರಗ್ಸ್ ದಂಧೆಯ ವಿರುದ್ಧ ಸಂಪ್ಯ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್‍ ಕುಮಾರ್‍, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸುನಿಲ್‍ ಕುಮಾರ್, ದ.ಕ ಜಿಲ್ಲಾ ಡಿ.ಎಸ್‍.ಬಿ ವಿಭಾಗದ ಪೊಲೀಸ್‍ ನಿರೀಕ್ಷಕರಾದ ನಂದ ಕುಮಾರ್‍, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಗುಣಪಾಲ ಹಾಗೂ ಸುಶ್ಮಾ ಜೆ ಭಂಡಾರಿ ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್‍ ರೈ, ಪ್ರಶಾಂತ್‍ ಎಂ, ಪ್ರವೀಣ್‍ ರೈ, ಹರ್ಷಿತ್‍, ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂಧಿಗಳಾದ ಪರಮೇಶ್ವರ ಗೌಡ, ಹರೀಶ್‍, ಸುಬ್ರಹ್ಮಣ್ಯ, ಬೀಮಸೇನ್‍, ಭವಿತ್ ರೈ, ನಾಗಾರಾಜ್‍, ಕಾರ್ತಿಕ್‍ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್‍, ಸಂಪತ್‍ ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಭೇಧಿಸಿದೆ