ಹುಲಿ ಸಮೀಕ್ಷೆಗೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ಕಳ್ಳತನ- ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ನ ಕಾಳಿ ಹುಲಿ ಸಂರಕ್ಷಿತ ವಲಯದಲ್ಲಿ ಅರಣ್ಯ ಇಲಾಖೆಯು ಹುಲಿ ಸರ್ವೆಗಾಗಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ದೇಶಾದ್ಯಂತ ಜನವರಿ 13 ರಿಂದ ಹುಲಿ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಇದರ ಭಾಗವಾಗಿ ಜೊಯಿಡಾ ಅರಣ್ಯ ಪ್ರದೇಶದಲ್ಲೂ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಲಾಗಿತ್ತು. ಹುಲಿ ಮಾತ್ರವಲ್ಲದೆ ಕಾಡಿನಲ್ಲಿ ಸಂಚರಿಸುವ ಇತರೆ ವನ್ಯಜೀವಿಗಳ ಮಾಹಿತಿ ಸಂಗ್ರಹಿಸಲು ಈ ಕ್ಯಾಮೆರಾ ಪ್ರಮುಖ ಪಾತ್ರ ವಹಿಸುತ್ತಿತ್ತು. ಕ್ಯಾಸಲ್ ರಾಕ್ ವನ್ಯಜೀವಿ ವಲಯದ ಅವೇಡಾ–ಪೊಪ್ಪವಾಡಿ ಬೀಟ್ ವ್ಯಾಪ್ತಿಯ ವಜ್ರ ಪಾಲ್ಸ್ ಕಡೆಗೆ ಹೋಗುವ ರಸ್ತೆಯ ಬಳಿ ಅರಣ್ಯಾಧಿಕಾರಿಗಳು ಕ್ಯಾಮೆರಾವನ್ನು ಇರಿಸಿದ್ದರು.
ಜನವರಿ 21 ರ ಸಂಜೆ ಅರಣ್ಯ ಸಿಬ್ಬಂದಿ ಕ್ಯಾಮೆರಾ ಸ್ಥಳದಲ್ಲಿರುವುದನ್ನು ಗಮನಿಸಿದ್ದರು. ಮರುದಿನ ಬೆಳಗ್ಗೆ ಪರಿಶೀಲಿಸಿದಾಗ ಕ್ಯಾಮೆರಾ ಮತ್ತು ಅದರ ಮೆಮೋರಿ ಕಾರ್ಡ್ ಕಾಣೆಯಾಗಿರುವುದು ತಿಳಿದು ಬಂದಿದೆ. ಅರಣ್ಯದಲ್ಲಿ ತಮ್ಮ ಅಕ್ರಮ ಚಟುವಟಿಕೆಗಳು ದಾಖಲಾಗುವ ಭಯದಿಂದ ಕಿಡಿಗೇಡಿಗಳು ಈ ಕ್ಯಾಮೆರಾವನ್ನೇ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಕ್ಯಾಮೆರಾ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಬಜಾರಕೋಣ ಉಪವಲಯ ಅರಣ್ಯಾಧಿಕಾರಿ ಸಂದೀಪ್ ಅರ್ಕಸಾಲಿ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.














