ಇ–ಸ್ವತ್ತು 2.0 ತಾಂತ್ರಿಕ ವೈಫಲ್ಯ: ಗ್ರಾಮೀಣ ಜನರಿಗೆ ತೀವ್ರ ಸಂಕಷ್ಟ – ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು -ಕಹಳೆ ನ್ಯೂಸ್

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು, ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ “ಜಾರಿಯಾದ ತಿಂಗಳಲ್ಲೇ ಕೈಕೊಟ್ಟ ಇ–ಸ್ವತ್ತು 2.0” ಎಂಬ ವರದಿಯನ್ನು ಉಲ್ಲೇಖಿಸಿ, ರಾಜ್ಯದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು.
ಗ್ರಾಮೀಣ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪಡೆಯಲು ಸರ್ಕಾರವು ಡಿಸೆಂಬರ್ 01 ರಿಂದ ಇ–ಸ್ವತ್ತು 2.0 ತಂತ್ರಾಂಶವನ್ನು ಜಾರಿಗೆ ತಂದಿದೆ. ಆದರೆ ಯೋಜನೆ ಜಾರಿಯಾದ ಒಂದೇ ತಿಂಗಳೊಳಗೆ ತಾಂತ್ರಿಕ ದೋಷಗಳು ಉಂಟಾಗಿ, ಸಾರ್ವಜನಿಕರು ತಮ್ಮ ಇ–ಖಾತೆ ಹಾಗೂ ಆಸ್ತಿ ದಾಖಲೆಗಳನ್ನು ಪಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.
ಈವರೆಗೆ 36,000ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿದ್ದು, ಅರ್ಜಿದಾರರಿಗೆ ತಮ್ಮ ಅರ್ಜಿಯ ಸ್ಥಿತಿಗತಿ ತಿಳಿಯುವ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಸ್ವೀಕೃತಗೊಂಡ ಅರ್ಜಿಗಳಲ್ಲಿ –
4,608 ಅರ್ಜಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಾಗಿನ್‌ನಲ್ಲಿ,
8,695 ಅರ್ಜಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನಲ್ಲಿ,
6,882 ಅರ್ಜಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರ ಲಾಗಿನ್‌ನಲ್ಲಿ,
4,322 ಅರ್ಜಿಗಳು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಲಾಗಿನ್‌ನಲ್ಲಿ ಅನುಮೋದನೆ ಇಲ್ಲದೆ ಬಾಕಿ ಉಳಿದಿವೆ. ಇದುವರೆಗೆ ಕೇವಲ 6,800 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.
ಈ ತಾಂತ್ರಿಕ ವೈಫಲ್ಯದಿಂದಾಗಿ ಸಾರ್ವಜನಿಕರು ಮಾತ್ರವಲ್ಲದೆ ಸರ್ಕಾರಕ್ಕೂ ಕೋಟ್ಯಾಂತರ ರೂಪಾಯಿ ಆದಾಯ ನಷ್ಟ ಉಂಟಾಗಿದೆ. ಇ–ಖಾತೆ ಲಭ್ಯವಿಲ್ಲದ ಕಾರಣ ಸಬ್–ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ, ಮಾರಾಟ ಪತ್ರ, ಅಡಮಾನ ಸೇರಿದಂತೆ ಅನೇಕ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ, ಇದು ಆಡಳಿತಾತ್ಮಕ ವೈಫಲ್ಯದ ಪ್ರತೀಕವಾಗಿದೆ ಎಂದು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇ–ಸ್ವತ್ತು 2.0 ತಂತ್ರಾಂಶದಲ್ಲಿನ ಎಲ್ಲಾ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ, ಗ್ರಾಮೀಣ ಜನರಿಗೆ ಆಗುತ್ತಿರುವ ಅನಗತ್ಯ ತೊಂದರೆಯನ್ನು ನಿವಾರಿಸಬೇಕು ಎಂದು ಶಾಸಕರು ಒತ್ತಾಯಿಸಿದರು.













