
ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಬೆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಬೆಡಿ ಉತ್ಸವ ಸಮಿತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸಮಿತಿ ಅಧ್ಯಕ್ಷ ಸದಾನಂದ ಕಾಮತ್ ಕೆ., ಸದಸ್ಯರುಗಳಾದ ಲಕ್ಷ್ಮಣ ಪ್ರಭು ಕುಂಬ್ಳೆ, ಸುಧಾಕರ ಕಾಮತ್, ದಯಾರಾಜ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ಜಾತ್ರೋತ್ಸವಕ್ಕೆ ಬಂದ ಜನರಿಗೆ ಅಪಾಯಗಳುಂಟಾಗುವಂತೆ ನಿರ್ಲಕ್ಷ್ಯ ವಹಿಸಿ, ಅಜಾಗರೂಕತನದಿಂದ ಸಿಡಿಮದ್ದು ಸಿಡಿಸಲಾಗಿದೆ ಎಂದು ಉಲ್ಲೇಖಿಸಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ್ದಾರೆ.
ಪ್ರಸಿದ್ಧವಾದ ಕುಂಬಳೆ ಬೆಡಿ ಉತ್ಸವಕ್ಕೆ ಕಾಸರಗೋಡಿನ ಕೂಡ್ಲು ಕೇಳುಗುಡ್ಡೆ ರಸ್ತೆಯ ಮುಹಮ್ಮದ್ ಕುಂಞಿ ಯ ಪತ್ನಿ ನಸೀಮ ಉದಾಸೀನಮ ಎಂಬವರಿಂದ ಸಿಡಿಮದ್ದು ಖರೀದಿಸಿ, ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಮುನ್ನೆಚ್ಚರಿಕಾ ಮಾನದಂಡ ಪಾಲಿಸಲಿಲ್ಲವೆಂದು ಇವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಶನಿವಾರ ರಾತ್ರಿ ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದೇವರ ಬೆಡಿಕಟ್ಟೆ ಸಮೀಪ ಸಿಡಿಮದ್ದು ಪ್ರದರ್ಶನ ನಡೆದಿತ್ತು. ಭಾರೀ ಸಂಖ್ಯೆಯ ಜನರು ನೆರೆದಿದ್ದರು.














