
ಮಧ್ಯಪ್ರದೇಶ: ಉಜ್ಜಯಿನಿಯಲ್ಲಿ 16 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ, ಕ್ರೂರವಾಗಿ ಹಲ್ಲೆ ನಡೆಸಿ, ಸುಮಾರು 1.5 ಕಿಲೋಮೀಟರ್ ಸಾರ್ವಜನಿಕ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಕ್ರೋಶ ವ್ಯಕ್ತವಾಗಿದೆ.
ಉಜ್ಜಯಿನಿಯ ಮಕ್ಸಿ ರಸ್ತೆಯ ಪನ್ವಾಸ ನಿವಾಸಿ ಅಪ್ರಾಪ್ತ ಬಾಲಕ ಅದೇ ಪ್ರದೇಶದ ಅಪ್ರಾಪ್ತ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದನು. ಇವರಿಬ್ಬರು ಮೂರು ತಿಂಗಳ ಹಿಂದೆ ಓಡಿಹೋಗಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಅನಂತರ ಬಾಲಕಿಯನ್ನು ಬಾಲಾಪರಾಧಿ ಗೃಹದಲ್ಲಿ ಇರಿಸಲಾಗಿದ್ದು, ಬಾಲಕನನ್ನು ಜೈಲಿಗೆ ಕಳುಹಿಸಲಾಗಿತ್ತು.
ಸುಮಾರು ಒಂದು ತಿಂಗಳ ಹಿಂದೆ ಬಿಡುಗಡೆಯಾದ ಬಾಲಕ ತನ್ನ ವಿಶೇಷ ಚೇತನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ದೇವಾಸ್‌ಗೆ ವಾಸಿಸಲು ತೆರಳಿದನು. ತಾಯಿಯ ಆರೋಗ್ಯ ಕೆಟ್ಟಿದ್ದರಿಂದ ಬಾಲಕ ತನ್ನ ಸ್ನೇಹಿತನನ್ನು ಭೇಟಿಯಾಗಿ ಚಿಕಿತ್ಸೆಗೆ ಹಣ ವ್ಯವಸ್ಥೆ ಮಾಡಲು ಉಜ್ಜಯಿನಿಯ ಶ್ರೀ ಸಿಂಥೆಟಿಕ್ಸ್ ಪ್ರದೇಶಕ್ಕೆ ಮರಳಿದ್ದಾನೆ. ಇದನ್ನು ಕಂಡ ಬಾಲಕಿಯ ಮನೆಯವರು ಬಾಲಕನ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ.
ತನ್ನನ್ನು ತೀವ್ರವಾಗಿ ಥಳಿಸಿ, ಬಟ್ಟೆಗಳನ್ನು ಹರಿದು, ಕೈಗಳನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಬಾಲಕ ಆರೋಪಿಸಿದ್ದಾರೆ. ನಂತರ ಅವನನ್ನು ಶಂಕರಪುರದಿಂದ ಜನನಿಬಿಡ ಮಾರುಕಟ್ಟೆ ಪ್ರದೇಶಗಳ ಮೂಲಕ ಪನ್ವಾಸ ಪೊಲೀಸ್ ಠಾಣೆ ಕಡೆಗೆ ಬೆತ್ತಲೆಯಾಗಿ ಎಳೆದೊಯ್ದರು. ನೂರಾರು ಜನರು ಈ ಕೃತ್ಯವನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ, ಆದರೆ ಯಾರೂ ಮಧ್ಯಪ್ರವೇಶಿಸಲಿಲ್ಲ. ಬದಲಾಗಿ, ಹಲವಾರು ಪ್ರೇಕ್ಷಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ.
ಪನ್ವಾಸ ಪೊಲೀಸ್ ಠಾಣೆಯ ಹೊರಗಿನ ಪೊಲೀಸರು ಕೊನೆಗೂ ತನ್ನನ್ನು ಗಮನಿಸಿ ರಕ್ಷಿಸಿದರು ಎಂದು ಬಲಿಪಶು ಹೇಳಿಕೊಂಡಿದ್ದಾನೆ. ಆರೋಪಿಗಳನ್ನು ಆರಂಭದಲ್ಲಿ ಬಂಧಿಸಲಾಗಿದ್ದರೂ, ಅದೇ ಸಂಜೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಎಫ್‌ಐಆರ್ ದಾಖಲು, ಆರೋಪಿ ಬಂಧನ
ಅಪ್ರಾಪ್ತ ವಯಸ್ಕ ಬಾಲಕನನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಕ್ಕಾಗಿ ನಾಲ್ವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಶರ್ಮಾ ದೃಢಪಡಿಸಿದ್ದಾರೆ. “ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು. ವೀಡಿಯೊ ಸಾಕ್ಷ್ಯಗಳನ್ನು ಬಳಸಿಕೊಂಡು ಪೊಲೀಸರು ಭಾಗಿಯಾಗಿರುವ ಇತರರನ್ನು ಸಹ ಗುರುತಿಸುತ್ತಿದ್ದಾರೆ.














