
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ತಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ಇದೀಗ ನಿಧಿ ನೋಡಲು ನೂರಾರು ಜನ ಸೇರಿದ್ದಾರೆ. ಸ್ಥಳಕ್ಕೆ ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ನೀಡಿದ್ದಾರೆ. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು, ಪುರತತ್ವ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತದೆ. ಪತ್ತೆಯಾದ ಚಿನ್ನಾಭರಣ ಯಾರ ಕಾಲದ್ದು ಎಂಬ ತನಿಖೆ ಕೂಡ ನಡೆಯುತ್ತಿದೆ.
470 ಗ್ರಾಂ ಚಿನ್ನ, ವಜ್ರದ ಆಭರಣಗಳು ಪತ್ತೆ
ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ (Gold Treasure) ಪತ್ತೆಯಾಗಿದೆ. ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಪಾಯ ಅಗೆಯುವ ಸಂದರ್ಭದಲ್ಲಿ, ಪ್ರಜ್ವಲ್ ರಿತ್ತಿ ಎಂಬ 8 ವರ್ಷದ ಮಗನಿಗೆ ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣ ಸಿಕ್ಕಿವೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್‌ಗೆ ವಿಷಯ ತಿಳಿಸಿದ್ದಾನೆ. ಬಳಿಕ ಸಿದ್ದು ಪಾಟೀಲ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್‌ಗೆ (HK Patil) ಮಾಹಿತಿ ರವಾನಿಸಿದ್ರು ಹೆಚ್.ಕೆ ಪಾಟೀಲ್ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.













