
ಟೆಹ್ರಾನ್: ಇರಾನ್ನಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗಿವೆ. ಇರಾನ್‌ನ ಕೊನೆಯ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಅವರ ಪುತ್ರ ಹಾಗೂ ಗಡಿಪಾರಾಗಿರುವ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಕರೆಗೆ ಓಗೊಟ್ಟು ಸಾವಿರಾರು ಜನರು ಗುರುವಾರ (ಜ.08) ತಡರಾತ್ರಿ ಟೆಹ್ರಾನ್ನ ಬೀದಿ-ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯ ಪರಿಣಾಮವನ್ನು ತಡೆಯಲು ಇರಾನ್ ಬಹುತೇಕ ಭಾಗಗಳಲ್ಲಿ ಇಂಟರ್ನೆಟ್ ಹಾಗೂ ಟೆಲಿಫೋನ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಈ ಪ್ರತಿಭಟನೆಯಲ್ಲಿ “ಜಾವಿದ್ ಶಾಹ್” (ಲಾಂಗ್ ಲೈವ್ ದಿ ಕಿಂಗ್), “ಪಹ್ಲವಿ ವಾಪಸ್ ಬರುತ್ತಾರೆ” ಎಂಬ ಘೋಷಣೆ ಜತೆಗೆ ಸರ್ಕಾರ ವಿರೋಧಿ ಘೋಷಣೆಗಳೂ ಕೇಳಿಬಂದವು.
ಪ್ರಸ್ತುತ ಇರಾನ್ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ದುಬಾರಿಯಾಗಿವೆ. ಉದ್ಯೋಗ ಕೊರತೆ ಕಾಡುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಇದರಿಂದ ಬೇಸತ್ತಿರುವ ಜನರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ರೆಜಾ ಪಹ್ಲವಿ ಕರೆಗೆ ಸಾವಿರಾರು ಪ್ರತಿಭಟನಾಕಾರರು ಒಮ್ಮೆಲೆ ಬೀದಿಗೆ ಇಳಿದರು. ಇರಾನ್‌ನ ಸುಪ್ರೀಂ ನಾಯಕ ಹಾಗೂ ಅಧ್ಯಕ್ಷ ಅಲಿ ಹೊಸೇನಿ ಖಮೇನಿ ಆಡಳಿತ ಬದಲಾವಣೆಗೆ ಭಾರೀ ಆಗ್ರಹಗಳು ಕೇಳಿಬರುತ್ತಿವೆ.
ಜನವರಿ 8ರ ಸಂಜೆ ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ಇರಾನ್ ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ, ಫೋನ್ ಸಂಪರ್ಕವನ್ನು ಕಡಿಗೊಳಿಸಿದೆ. ಪ್ರತಿಭಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಹೋಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಹಲವಾರು ಪ್ರದೇಶಗಳಲ್ಲಿ ವಾಯುಪಡೆಯವರಿಗೆ ಸೂಚನೆಗಳು ನೀಡಲಾಗಿದೆ ಮತ್ತು ತಬ್ರಿಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.














