
ಉತ್ತರ ಪ್ರದೇಶ ಬಿಜೆಪಿ ವಲಯದಲ್ಲಿ ಮಾತ್ರವಲ್ಲದೆ ಹೈಕಮಾಂಡ್ ಮಟ್ಟದಲ್ಲೂ ರಾಜ್ಯ ನಾಯಕತ್ವದೊಂದಿಗೆ ಆಂತರಿಕ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ(ಜ5) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್, “ಪ್ರಧಾನಮಂತ್ರಿಯವರ ದೃಷ್ಟಿಕೋನವು ನವ ಉತ್ತರ ಪ್ರದೇಶದ ಅಭಿವೃದ್ಧಿ ಪ್ರಯಾಣವನ್ನು ಚೈತನ್ಯಪೂರ್ಣಗೊಳಿಸುತ್ತದೆ ಮತ್ತು ವೇಗಗೊಳಿಸುತ್ತದೆ. ಸಮಯವನ್ನು ಮೀಸಲಿಟ್ಟು ನಿರ್ದೇಶನ ನೀಡಿದ್ದಕ್ಕಾಗಿ ಅವರು ಮೋದಿಯವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿ, ಈ ಸಂವಾದವು ರಾಜ್ಯದ ಆಡಳಿತ ಮತ್ತು ಬೆಳವಣಿಗೆಗೆ ನವೀಕೃತ ಪ್ರೇರಣೆಯ ಮೂಲವಾಗಿದೆ” ಎಂದು ಬಣ್ಣಿಸಿದ್ದಾರೆ.
ಸಿಎಂ ಯೋಗಿ ಅವರು ಪ್ರಧಾನಿ ಮೋದಿ ಅವರಿಗೆ ಆಕರ್ಷಕ ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಈ ಮಾದರಿಯನ್ನು ಗುಲಾಬಿ ಮೀನಕರಿ ಕಲೆಯನ್ನು ಬಳಸಿ ರಚಿಸಲಾಗಿದ್ದು, ಇದನ್ನು ಕುಂಜ್ ಬಿಹಾರಿ ಜಿ ತಯಾರಿಸಿದ್ದಾರೆ.
ಪ್ರಧಾನ ಮಂತ್ರಿಯವರ ಕಚೇರಿಯೂ ಸಭೆಯ ಎರಡು ಫೋಟೋಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದೆ.
ಭೇಟಿಗೆ ಮಹತ್ವವೇಕೆ?
2027 ರಲ್ಲಿ ಫೆಬ್ರವರಿ-ಮಾರ್ಚ್ ನಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ಆರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇತ್ತೀಚೆಗೆ, ಬಿಜೆಪಿ ನಿತಿನ್ ನಬಿನ್ ಅವರನ್ನು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಉತ್ತರ ಪ್ರದೇಶದಲ್ಲಿ ಪಂಕಜ್ ಚೌಧರಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ . ಹುದ್ದೆಗೆ ನಾಮಪತ್ರ ಸಲ್ಲಿಸಿದ ಏಕೈಕ ನಾಯಕ ಪಂಕಜ್ ಚೌಧರಿ ಅವರಾಗಿದ್ದರು.
ಜಾತಿ ರಾಜಕೀಯ; ಸಹಭೋಜನ ಶಾಕ್!
ಉತ್ತರಪ್ರದೇಶದಲ್ಲಿ ಹಲವಾರು ಬ್ರಾಹ್ಮಣ ಶಾಸಕರು ಒಟ್ಟಾಗಿ ಸಹಭೋಜನ ನಡೆಸಿದುದು ಸುದ್ದಿಯಾಗಿ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು ಈ ವಿಷಯ ದೆಹಲಿಯನ್ನೂ ತಲುಪಿತ್ತು. ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಪಿ.ಎನ್. ಪಾಠಕ್ ಅವರ ಲಕ್ನೋ ನಿವಾಸದಲ್ಲಿ ಬ್ರಾಹ್ಮಣ ಬಿಜೆಪಿ ಶಾಸಕರ ಸಭೆ ನಡೆದಿತ್ತು. ಈ ಸಭೆಯನ್ನು ಸಹಭೋಜನ ಎಂದು ಕರೆಯಲಾಗುತ್ತಿತ್ತು. ಸುಮಾರು 40 ಶಾಸಕರು ಮತ್ತು ಎಂಎಲ್‌ಸಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದು ವಿಶೇಷ.
ಸುದ್ದಿಯಾದ ಬ್ರಾಹ್ಮಣ ಶಾಸಕರ ಸಭೆಗೂ ಮುನ್ನ, ಠಾಕೂರ್ ಶಾಸಕರು ಎರಡು ಸಭೆಗಳನ್ನು ನಡೆಸಿದ್ದರು. ರಾಜ್ಯ ಸರಕಾರದ ಸಚಿವರಾದ ಜೈವೀರ್ ಸಿಂಗ್ ಮತ್ತು ದಯಾಶಂಕರ್ ಸಿಂಗ್ ಮತ್ತು ಇತರ ಸಚಿವರು ಮತ್ತು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಮಾಜಿ ಸಂಸದ ರಾಜವೀರ್ ಸಿಂಗ್ ರಾಜು ಭೈಯಾ ಅವರು ಲೋಧ್ ಸಮುದಾಯದ ಶಾಸಕರು, ಸಂಸದರು ಮತ್ತು ನಾಯಕರ ಸಮ್ಮೇಳನವನ್ನು ಸಹ ಆಯೋಜಿಸಿದ್ದರು. ಆದಾಗ್ಯೂ, ಆ ಸಮಯದಲ್ಲಿ ಪಕ್ಷವು ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಕುರ್ಮಿ ಬೌದ್ಧಿಕ ವಿಚಾರ ಮಂಚ್ ಬ್ಯಾನರ್ ಅಡಿಯಲ್ಲಿ ಬಿಜೆಪಿ ಕುರ್ಮಿ ಶಾಸಕರು ಸಹ ಇದೇ ರೀತಿಯ ಸಭೆಯನ್ನು ನಡೆಸಿದರು. ಆಗಲೂ, ವಿಷಯ ಅಷ್ಟೊಂದು ಸುದ್ದಿಯಾಗಿರಲಿಲ್ಲ.
ಶೀಘ್ರ ಸಂಪುಟ ವಿಸ್ತರಣೆ
ಡಿಸೆಂಬರ್ 30 ರಂದು ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಂಭಾವ್ಯ ಹೆಸರುಗಳ ಬಗ್ಗೆ ಚರ್ಚಿಸಲಾಗಿದೆ. ಹೊಸದಾಗಿ ನೇಮಕಗೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಸಭೆಯಲ್ಲಿ ಉಪಸ್ಥಿತರಿದ್ದರು ಮತ್ತು ದೆಹಲಿಗೆ ತೆರಳಿ ಪಕ್ಷದ ನಾಯಕತ್ವದೊಂದಿಗೆ ಚರ್ಚೆ ನಡೆಸಿದ್ದರು.
ಗರಿಷ್ಠ 60 ಸಚಿವರ ಸಂಖ್ಯಾ ಬಲ ಇರಬಹುದಾದ ಯುಪಿ ಸರಕಾರವು ಪ್ರಸ್ತುತ ಮುಖ್ಯಮಂತ್ರಿ ಸೇರಿದಂತೆ 54 ಸಚಿವರನ್ನು ಹೊಂದಿದೆ. ಇದಲ್ಲದೆ, ಇದು 2027 ರ ಚುನಾವಣೆಗೆ ಮೊದಲು ಸಂಪುಟ ಕೊನೆಯ ಬಾರಿ ವಿಸ್ತರಣೆಯಾಗುವ ನಿರೀಕ್ಷೆಯಿದೆ.ಕೆಲ ಬದಾಲಾವಣೆಗಳನ್ನೂ ಮಾಡುವ ಸಾಧ್ಯತೆಗಳಿವೆ. ಕೆಲ ಸಚಿವರನ್ನು ಕೈಬಿಟ್ಟು ಕ್ಷೇತ್ರದಲ್ಲಿ ಜನರೊಂದಿಗೆ ಬೆರೆಯಲು ಮತ್ತು ಪಕ್ಷ ಸಂಘಟನೆ ನಡೆಸಲು ಸೂಚನೆ ನೀಡುವ ಸಾಧ್ಯತೆಗಳಿವೆ.
ಯಾವುದೇ ಭಿನ್ನಮತಗಳಿದ್ದರೂ ಈಗಲೇ ಸರಿಪಡಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಬಲಾಢ್ಯ ಶಕ್ತಿಯಾಗಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕತ್ವ ಮತ್ತು ಕೇಂದ್ರ ನಾಯಕತ್ವದ ನಡುವಿನ ಭಿನ್ನಾಭಿಪ್ರಾಯ ಪಕ್ಷಕ್ಕೆ ಭಾರಿ ಹೊಡೆತ ನೀಡಿತ್ತು ಎನ್ನುವುದು ಬಿಜೆಪಿಗೆ ಈಗಲೂ ಕಾಡುತ್ತಿರುವ ವಿಚಾರ.ಭಾರೀ ಲಾಭ ಮಾಡಿಕೊಂಡಿದ್ದ ಎಸ್‌ಪಿ ಮತ್ತು ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟ 43 ಸ್ಥಾನಗಳನ್ನು(43.52%ಮತ) ಗೆದ್ದು ಸಂಭ್ರಮಿಸಿತ್ತು. ಎನ್‌ಡಿಎ 36 ಸ್ಥಾನಗಳನ್ನು (43.69%ಮತ) ಮಾತ್ರ ಗೆದ್ದು ಭಾರೀ ಶಾಕ್ ಅನುಭವಿಸಿತ್ತು.ಮತ್ತೆ ಆ ತಪ್ಪು ನಡೆಯದಂತೆ ಸೂಕ್ಷ್ಮ ಅವಲೋಕನ ಮಾಡಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಕೇಸರಿ ಪಾಳಯ ಮುಂದಾಗಿದೆ ಎನ್ನಲಾಗಿದೆ.














