ಮಂಗಳೂರಿನ ಕಸ ನಿರ್ವಹಣೆಯ ಅವ್ಯವಸ್ಥೆ ಕುರಿತು ಸದನದಲ್ಲಿ ಪ್ರಶ್ನಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು -ಕಹಳೆ ನ್ಯೂಸ್

ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ದಕ್ಷಿಣ ಕನ್ನಡ–ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಮಂಗಳೂರು ಮಹಾನಗರ ಪಾಲಿಕೆಯ ಕಸ ನಿರ್ವಹಣೆಯ ವೈಫಲ್ಯ ಕುರಿತು ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿ, ಸರ್ಕಾರದ ಗಮನ ಸೆಳೆದರು.
ಶಾಸಕರು ತಮ್ಮ ಪ್ರಶ್ನೆಯಲ್ಲಿ –
• ಮಂಗಳೂರಿನಲ್ಲಿ ಹಸಿ-ಒಣ ಕಸದ ವಿಂಗಡಣೆಯ ಅವ್ಯವಸ್ಥೆ
• ಎರಡು – ಮೂರು ದಿನಗಳಿಗೊಮ್ಮೆ ಮಾತ್ರ ಕಸ ಸಂಗ್ರಹವಾಗುವ ಪ್ರದೇಶಗಳು
• ರಸ್ತೆಗೆ ಕಸ ಎಸೆಯುವಿಕೆ ಹೆಚ್ಚಿರುವುದು
• ಸಿಸಿಟಿವಿ ಮೇಲ್ವಿಚಾರಣೆಯ ಕೊರತೆ
• ಪಚ್ಚನಾಡಿ ಡಂಪಿಂಗ್ ಯಾರ್ಡ್ ಸ್ಥಿತಿ
• ಸ್ವಚ್ಛ ಸರ್ವೇಕ್ಷಣೆಯ ಫಲಿತಾಂಶದ ಬಗ್ಗೆ
ಇವುಗಳ ಬಗ್ಗೆ ಸಮಗ್ರ ವರದಿ ಮತ್ತು ಕ್ರಮವನ್ನು ಸರ್ಕಾರದಿಂದ ಬೇಡಿಕೆ ಇಟ್ಟರು.
ಸಚಿವರು ಲಿಖಿತ ಉತ್ತರದಲ್ಲಿ “ಸಿಸಿಟಿವಿ ಅಳವಡಿಕೆ, LED ಬೋರ್ಡ್‌ಗಳು, ತ್ಯಾಜ್ಯ ಎಸೆಯುವವರಿಗೆ ದಂಡ” ಮುಂತಾದ ಕ್ರಮಗಳನ್ನು ಉಲ್ಲೇಖಿಸಿದರು.
“ಮಂಗಳೂರು ರಾಜ್ಯದ ಎರಡನೇ ಆರ್ಥಿಕ ರಾಜಧಾನಿ – ಆದರೆ ಸ್ವಚ್ಛತೆಯಲ್ಲಿ ಅತ್ಯಂತ ಹೀನ ಸ್ಥಿತಿಗೆ ತಲುಪಿದೆ” ಎಂದರು.
ಶಾಸಕರು ಸದನದಲ್ಲಿ:
“ಮಂಗಳೂರಿನ ಪಚ್ಚನಾಡಿ-ವಾಮಂಜೂರು ಡಂಪಿಂಗ್ ಯಾರ್ಡ್‌ನಲ್ಲಿ ಸುಮಾರು 9 ಲಕ್ಷ ಟನ್ ಕಸ ವರ್ಷಗಳಿಂದ ನಿರ್ವಹಣೆಯಾಗದೆ ಹಾಗೆ ಬಿದ್ದಿದೆ. ಹೊಸ ಮಣ್ಣು-ಹೂಳು ಹಳೆಯ ಕಸದ ಮೇಲೆ ಜಮೆಯಾಗಿದ್ದು, ಭಯಾನಕ ದುರ್ವಾಸನೆ, ಹುಳು-ಹುಪ್ಪಟೆಗಳು, ವಿಷಕಾರಿ ವಾತಾವರಣದಿಂದ ಮಂದರಬೈಲು ಗ್ರಾಮದಲ್ಲಿ ಜನರು ಬದುಕಲು ಹೆದರುತ್ತಿದ್ದಾರೆ. ಸಂಜೆ ಮನೆಬಿಟ್ಟು ಹೊರಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ. ಇದು ಪರಿಸರ ದುರಂತವಲ್ಲದೆ ಇನ್ನೇನು?”
ಈ ಕಸದ ತ್ಯಾಜ್ಯಗಳಿಂದ ಹೊಸ ಹೊಸ ರೀತಿಯ ಇರುವೆಗಳು, ಹುಳಗಳು ಹುಟ್ಟಿಕೊಳ್ಳುತ್ತಿದ್ದು ಅಲ್ಲಿರುವ ಮನೆಗಳ ಮುಂದೆ ಇವುಗಳು ಗೂಡು ಮಾಡುತ್ತಿದ್ದು ಇದು ಸ್ಥಳೀಯ ಜನರ ಅರೋಗ್ಯ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
“ಇದು ರಾಜಕೀಯಗೊಳ್ಳುವ ವಿಷಯ ಅಲ್ಲ – ಜನರ ಆರೋಗ್ಯ, ಜೀವಮಾನ, ಪರಿಸರದ ಪ್ರಶ್ನೆ. ಮಂಗಳೂರು ಭಾಗದ ಶಾಸಕರೊಂದಿಗೆ ಸಚಿವರು ಸ್ಥಳಕ್ಕೆ ಬಂದು ನೈಜ ಪರಿಸ್ಥಿತಿ ನೋಡದಿದ್ದರೆ ಸಮಸ್ಯೆ ಹೇಗೆ ಪರಿಹಾರ?”
“ಮಂಗಳೂರು ಜನರು ಉತ್ತಮ ಗಾಳಿ, ಬೆಳಕು, ಆರೋಗ್ಯಕರ ವಾಸಸ್ಥಳಕ್ಕೆ ಅರ್ಹರು. ಈ ವಿಷಯದಲ್ಲಿ ನಾವು ರಾಜಕೀಯ ಮಾಡುವ ಪ್ರಶ್ನೆಯಿಲ್ಲ, ಮಾನ್ಯ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಮಂಜುನಾಥ್ ಭಂಡಾರಿ, ಶ್ರೀ ಐವಾನ್ ಡಿಸೋಜಾ ಅವರೆಲ್ಲರೂ ಬೆಂಬಲ ಕೊಡುತ್ತಾರೆ ಮತ್ತು ಸ್ಥಳಕ್ಕೆ ಬರುತ್ತಾರೆ. ಪಕ್ಷಾತೀತವಾಗಿ ಪರಿಹಾರಕ್ಕೆ ನಾವು ಕೈಜೋಡಿಸಲು ಸಿದ್ಧ. ಸರ್ಕಾರ ಕೂಡ ತಕ್ಷಣ ಕ್ರಮಕ್ಕೆ ಬರಬೇಕು.”
ಈ ಸಂದರ್ಭದಲ್ಲಿ ಶಾಸಕರು ಮಂಗಳೂರಿನಲ್ಲಿ ಒಮ್ಮೆ ನಡೆದ ಯಶಸ್ವಿ ಸ್ವಚ್ಛತಾ ಚಳವಳಿಯನ್ನು ನೆನಪಿಸಿದರು. 2015 ರಿಂದ 2019 ರವರೆಗೆ ರಾಮಕೃಷ್ಣ ಮಠ ಮತ್ತು ಮಿಷನ್‌ವರು ಪ್ರತಿ ಆದಿತ್ಯವಾರ ನಗರದೆಲ್ಲೆಡೆ ಹಮ್ಮಿಕೊಂಡಿದ್ದ ‘ಸ್ವಚ್ಛ ಮಂಗಳೂರು ಅಭಿಯಾನ’ದಲ್ಲಿ ಸುಮಾರು 10,000ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ POT COMPOST ವ್ಯವಸ್ಥೆ ಜಾರಿಗೆ ಬಂದು, ಶಾಲೆಗಳಲ್ಲಿನ “ಸ್ವಚ್ಛ ಮನಸ್ಸು” ಮತ್ತು ಕಾಲೇಜುಗಳಲ್ಲಿ “ಸ್ವಚ್ಛ ಸೋಚ್” ಕಾರ್ಯಕ್ರಮಗಳ ಮೂಲಕ ನೂರಾರು ಮಕ್ಕಳಲ್ಲಿ ಮತ್ತು ಯುವಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲಾಗಿತ್ತು. ಇಂತಹ ಫಲಪ್ರದ, ಸಮುದಾಯ ಆಧಾರಿತ ಕ್ರಮಗಳನ್ನು ಮತ್ತೆ ಮಂಗಳೂರು ನಗರದಲ್ಲಿ ಪುನರುತ್ಥಾನಗೊಳಿಸುವುದು ಅಗತ್ಯವೆಂದು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದರು.
ಸಚಿವರಿಂದ ಧನಾತ್ಮಕ ಪ್ರತಿಕ್ರಿಯೆ
ಶಾಸಕರ ಬಲವಾದ ಒತ್ತಾಯ ಮತ್ತು ನಿಖರ ಮಾಹಿತಿ ಮಂಡನೆಯ ಪರಿಣಾಮವಾಗಿ, ಸಂಬಂಧಿಸಿದ ಸಚಿವರು – ಶೀಘ್ರವಾಗಿ ಮಂಗಳೂರಿಗೆ ಭೇಟಿ ನೀಡಿ, ಎಲ್ಲಾ ಶಾಸಕರೊಂದಿಗೆ ಸ್ಥಳಾವಲೋಕನ ಮಾಡುವ ಭರವಸೆಯನ್ನು ಸದನದಲ್ಲೇ ನೀಡಿದರು.














