ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಿಗ್‌ಬಾಸ್ ಸ್ಪರ್ಧಿಯ ಮಾಜಿ ಪತಿ- ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿನ ಖ್ಯಾತ ‘ಬ್ಯಾಸ್ಟಿಯನ್’ ಪಬ್‌ನಲ್ಲಿ ಗಲಾಟೆ ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಒಡೆತನದ ಈ ಐಷಾರಾಮಿ ಪಬ್‌ನಲ್ಲಿ ನಡೆದ ಘಟನೆಯೊಂದು, ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಗುರುವಾರ ತಡರಾತ್ರಿ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪಬ್ ಮುಚ್ಚುವ ಸಮಯದಲ್ಲಿ ಸರ್ವಿಸ್ ವಿಚಾರವಾಗಿ ಗಲಾಟೆಯಾಗಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಪಬ್ ಸಿಬ್ಬಂದಿ ಹಾಗೂ ಉದ್ಯಮಿ ಸತ್ಯ ನಾಯ್ಡು ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ನಂತರ ಸತ್ಯ ನಾಯ್ಡು ಪಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ವಿಸ್ ವಿಚಾರವೇ ಗಲಾಟೆಗೆ ಕಾರಣ?
ಪಬ್‌ನಲ್ಲಿ ಪಾನೀಯ ಹಾಗೂ ಸರ್ವಿಸ್ ನೀಡುವ ವಿಚಾರಕ್ಕೆ ಸತ್ಯ ನಾಯ್ಡು ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ. ಸಿಬ್ಬಂದಿ ವಿಷಯವನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವರು ಮಾತು ಕೇಳದೆ ಆಕ್ರೋಶಗೊಂಡಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಘಟನೆಯ ವೇಳೆ ಸತ್ಯ ನಾಯ್ಡು ಅತಿಯಾಗಿ ಮದ್ಯಪಾನ ಮಾಡಿದ್ದರೆಂದು ಹೇಳಲಾಗುತ್ತಿದೆ. ಅವರ ವರ್ತನೆ ನಿಯಂತ್ರಣ ತಪ್ಪಿದಂತೆ ಕಂಡುಬಂದಿದ್ದು, ಪರಿಸ್ಥಿತಿಯನ್ನು ತಡೆಯಲು ಪಬ್‌ನ ಬೌನ್ಸರ್‌ಗಳು ಮಧ್ಯ ಪ್ರವೇಶ ಮಾಡಿದ್ದಾರೆ.
ಘಟನೆ ನಡೆದಿದ್ದರೂ ಇದುವರೆಗೆ ಪಬ್ ಸಿಬ್ಬಂದಿ ಅಥವಾ ನಿರ್ವಹಣೆಯಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ, ಗಲಾಟೆಯ ವಿಡಿಯೋವೊಂದು ಪೊಲೀಸರಿಗೆ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣದ ಮಾಹಿತಿ ಸಂಗ್ರಹಿಸಿದ್ದಾರೆ.
ಶುಕ್ರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪಬ್ ಸಿಬ್ಬಂದಿಯವರಿಂದ ವಿವರಗಳನ್ನು ಪಡೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳು ಮತ್ತು ವೈರಲ್ ವಿಡಿಯೋವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸತ್ಯ ನಾಯ್ಡು ಹಿನ್ನೆಲೆ
ಗಲಾಟೆ ನಡೆಸಿದ ಆರೋಪ ಎದುರಿಸುತ್ತಿರುವ ಸತ್ಯ ನಾಯ್ಡು, ಉದ್ಯಮಿಯಾಗಿದ್ದು, ಅವರು ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಖ್ಯಾತ ನಿರೂಪಕಿಯ ಮಾಜಿ ಪತಿ ಎಂದು ಹೇಳಲಾಗುತ್ತಿದೆ.
ಪಬ್‌ನಲ್ಲಿ ನಡೆದ ಗಲಾಟೆಯ ವಿಡಿಯೋ ದೃಶ್ಯಗಳು ಗ್ಯಾರಂಟಿ ನ್ಯೂಸ್‌ಗೆ ಲಭ್ಯವಾಗಿವೆ. ಈ ದೃಶ್ಯಗಳಲ್ಲಿ ಪಬ್ ಒಳಗಿನ ಗಲಾಟೆ, ಸಿಬ್ಬಂದಿ ಮತ್ತು ಬೌನ್ಸರ್‌ಗಳ ಮಧ್ಯ ಪ್ರವೇಶ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.














