ರಾಜ್ಯಾದ್ಯಂತ ಭಾರೀ ಥಂಡೀ..! 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ತಾಪಮಾನ 9 ಡಿ.ಸೆ.ಗೆ ಕುಸಿತ- ಕಹಳೆ ನ್ಯೂಸ್

ಕರ್ನಾಟಕದಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕನಿಷ್ಠ ತಾಪಮಾನ ಕುಸಿಯುತ್ತಿದೆ. ಅಲ್ಲದೇ ಬೆಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಆವರಿಸುತ್ತಿದೆ. ಈ ವಾತಾವರಣ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಬರೋಬ್ಬರಿ 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
ಬೀದರ್‌ನಲ್ಲಿ ರಾಜ್ಯದ ಅತೀ ಕನಿಷ್ಠ ತಾಪಮಾನ ದಾಖಲಾಗಿದೆ.
ಮೊದಲು ಬೀದರ್ ಜಿಲ್ಲೆಗೆ ಮಾತ್ರ ನೀಡಿದ್ದ ಶೀತದ ಅಲೆ ಎಚ್ಚರಿಕೆ, ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ನೀಡಲಾಗಿದೆ. ಈ ಭಾಗದಲ್ಲಿ ಶೀತ ಗಾಳಿಯು ಮೇಲುಗೈ ಸಾಧಿಸಿದೆ. ಇದೇ ವಾತಾವರಣ ರಾಜ್ಯಾದ್ಯಂತ ವಿಸ್ತರಣೆ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಅದರ ಮುನ್ಸೂಚನೆ ಎಂಬಂತೆ ಈಗಾಗಲೇ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಳಿತ ಉಂಟಾಗಿದೆ. ಮಂಜು ಆವರಿಸಿದ್ದು, ಸ್ಪಷ್ಟ ನೀಲಿ ಆಕಾಶವಿದೆ. ಹಗಲು ಒಣ ಹವೆ, ಬೆಳಗ್ಗೆ ರಾತ್ರಿ ಮೈ ಕೊರೆವ ಚಳಿ ಆವರಿಸುತ್ತಿದೆ.
Cold Wave: ಯೆಲ್ಲೋ ಅಲರ್ಟ್ ಜಿಲ್ಲೆಗಳು ಯಾವುವು?
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ತೇವ ಭರಿತ ಗಾಳಿ ಬೀಸುವಿಕೆ ವೇಗ, ಪ್ರಮಾಣ ಹೆಚ್ಚಾಗಲಿದೆ. ಈ ಭಾಗದಲ್ಲಿ ಮೈಕೊರೆವ ಚಳಿ, ಬೆಳಗ್ಗೆ ಅಧಿಕ ಮಂಜು ಆವರಿಸಲಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-6ರಷ್ಟು ಕುಸಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ.
ಬೀದರ್ ಸೇರಿ ವಿವಿಧೆಡೆ ಭಾರೀ ಥಂಡಿ..!
ಕನಿಷ್ಠ ತಾಪಮಾನದ ಜಿಲ್ಲೆಗಳಲ್ಲಿ ಬೀದರ್ ಅಗ್ರಸ್ಥಾನದಲ್ಲಿದೆ. ವಿಜಯಪುರ ಮತ್ತು ಧಾರವಾಡ ಮುಂದಿದೆ. ಬೀದರ್‌ನಲ್ಲಿ ನೆನ್ನೆ 9.2 ಡಿಗ್ರಿ ಸೆಲ್ಸಿಯಸ್, ಹಾಗೂ ವಿಜಯಪುರ ಮತ್ತು ಧಾರವಾಡದಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಮೂಲಕ ಮೂರು ಜಿಲ್ಲೆಗಳ ಜನರು ಥಂಡಿಗೆ ತತ್ತರಿಸಿದ್ದಾರೆ.
ಹಾಸನದಲ್ಲಿ 10.6 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿಯಲ್ಲಿ 12.4 ಡಿಗ್ರಿ ಸೆಲ್ಸಿಯಸ್, ಮಂಡ್ಯದಲ್ಲಿ 13.8 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 13 ಡಿಗ್ರಿ ಸೆಲ್ಸಿಯಸ್, ಕಲಬುರಗಿ 13.8 ಡಿಗ್ರಿ ಸೆಲ್ಸಿಯಸ್, ಹಾವೇರಿ 13.4 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್‌ಪೋರ್ಟ್ 12.6 ಡಿಗ್ರಿ ಸೆಲ್ಸಿಯಸ್, ರಾಯಚೂರು 12 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ 15 ಡಿಗ್ರಿ ಸೆಲ್ಸಿಯಸ್‌ಮತ್ತು ಬೆಂಗಳೂರು ಕೆಐಎಎಲ್ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಅತೀ ಚಳಿ ದಾಖಲಾಗಿದೆ. ತಾಪಮಾನದಲ್ಲಿ ವಿಪರೀತ ಕುಸಿತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಲ್ಲಿ ಹೆಚ್ಚಿದ ಚಳಿ ಭೀತಿ
ರಾಜಧಾನಿ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ನಿತ್ಯ ಬೆಳಗ್ಗೆ ಜನರು ಥಂಡಿಯ ವಾತಾವರಣಕ್ಕ ಸಾಕ್ಷಿಯಾಗುತ್ತಿದ್ದಾರೆ. ಕನಿಷ್ಠ ತಾಪಮಾನದಲ್ಲಿ ಕುಸಿತವಾಗಿದೆ. ರಾತ್ರಿ ಹೊತ್ತು ನೆನ್ನೆ ತಾಪಮಾನ ಮತ್ತೆ 01 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ ಆಗಿದೆ. ರಾತ್ರಿ 15 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಈ ಮೂಲಕ ನಗರದಲ್ಲಿ ಗರಿಷ್ಠ 29 ಹಾಗೂ ಕನಿಷ್ಠ 15 ಡಿ.ಸೆ. ತಲುಪಿದೆ. ಬೆಂಗಳೂರಿಗೂ ಉತ್ತರ ಕರ್ನಾಟಕದ ಜಿಲ್ಲೆಗಳಂತೆ ಶೀತ ಅಲೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ಒಂದು ವಾರದಲ್ಲಿ ನಗರದಲ್ಲಿ ಮತ್ತಷ್ಟು ಚಳಿ ಕಂಡು ಬರುವ ನಿರೀಕ್ಷೆ ಇದೆ.














