
ತುಮಕೂರು – ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಬಳಿಯ ವಸಂತನರಸಾಪುರದಲ್ಲೇ ಸ್ಥಾಪನೆಯಾಗಬೇಕೆಂದು ಬಿಜೆಪಿ ಮಾಜಿ ಸಂಸದ ಜಿ.ಎಸ್. ಬಸವರಾಜ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರಪ್ರದೇಶ ಮತ್ತು ದೆಹಲಿಯ ಗಡಿ ಭಾಗದಲ್ಲಿರುವ ನೋಯಿಡಾ ಹೊರತು ಪಡಿಸಿದರೆ, ಎರಡನೇ ಕೈಗಾರಿಕಾ ಹಬ್ ಆಗಿ ತುಮಕೂರು ಅಭಿವೃದ್ಧಿಗೊಳ್ಳುತ್ತದೆ. ಇಲ್ಲಿಗೆ ಮೆಟ್ರೊ ರೈಲು ಸಂಪರ್ಕವೂ ಬೇಕು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಬೇಕು ಎಂದು ಪ್ರತಿಪಾದಿಸಿದ್ದಾರೆ.
ತುಮಕೂರಿನಲ್ಲಿ ವಿಮಾನ ನಿಲ್ದಾಣವಾದರೆ, ಬೀದರ್‌ನಿಂದ ಉತ್ತರಕರ್ನಾಟಕದ ಎಲ್ಲಾ 19 ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಗಡಿ ಭಾಗದಲ್ಲಿರುವ ಕೆಲವರಿಗೆ ಕರ್ನಾಟಕದ ಮೇಲೆ ಪ್ರೀತಿ ಇಲ್ಲ. ಎಲ್ಲವೂ ತಮ ಊರಿಗೆ ಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡಿನ ಗಡಿ ಭಾಗ ಆನೇಕಲ್‌ನಲ್ಲಿ ಹೆಚ್ಚು ಕೈಗಾರಿಕೆಗಳಿವೆ. ತಮಿಳುನಾಡಿನವರು ಕರ್ನಾಟಕದಲ್ಲಿ ಕೈಗಾರಿಕೆ ಮಾಡುತ್ತಾರೆ, ತಮಿಳುನಾಡಿನಲ್ಲಿ ವಾಸ ಮಾಡುತ್ತಾರೆ. ನಮವರೇ ನಮಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ವಾತಾವರಣ ನಿರ್ಮಾಣವಾಗಬೇಕೆಂದು ಬಸವರಾಜು ಪ್ರತಿಪಾದಿಸಿದಾರೆ.
ವಸಂತನರಸಾಪುರ ಫುಡ್ ಪಾರ್ಕ್ ಜೊತೆಗೆ 1 ಸಾವಿರ ಎಕರೆಯಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಎಸ್ಟೇಟ್ ನಿರ್ಮಾಣವಾಗುತ್ತಿದೆ. ಹೆಚ್ಚುವರಿಯಾಗಿ ಇನ್ನೂ ಒಂದು ಸಾವಿರ ಎಕರೆ ಅಲ್ಲಿಗೆ ಒದಗಿಸುವ ಸಾಧ್ಯತೆ ಇದೆ. ಕೈಗಾರಿಕಾ ಪ್ರದೇಶಕ್ಕಾಗಿಯೇ 4 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅನ್ನು ಪೂರೈಸಲಾಗುತ್ತಿದೆ. ಇದಕ್ಕಾಗಿ ಸೆಂಟ್ರಲ್ ಗ್ರಿಡ್ ಸ್ಥಾಪಿಸಲಾಗುತ್ತಿದೆ. ಹೇಮಾವತಿಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ವಿವರಿಸಿದರು.
ಈ ರೀತಿ ಎಲ್ಲಾ ಸೌಲಭ್ಯವಿರುವ ತುಮಕೂರಿಗೆ ಹೆಚ್ಚಿನ ಸಂಪರ್ಕ ವ್ಯವಸ್ಥೆಗಳು ಬೇಕು. ಸಂಸದ ತೇಜಸ್ವಿಸೂರ್ಯ, ಮೆಟ್ರೋ ಯೋಜನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.














