ದೆಹಲಿ ಸ್ಪೋಟ: ರಾತ್ರೋರಾತ್ರಿ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಟಿ, ಮೊದಲ ಪ್ರತಿಕ್ರಿಯೆ – ಕಹಳೆ ನ್ಯೂಸ್

ನಿನ್ನೆ (ನ. 10) ನಗರದ ಕೆಂಪು ಕೋಟೆ ಸಮೀಪವಿರುವ ಲಾ ಕಿಲ್ಲಾ ಮೆಟ್ರೊ ನಿಲ್ದಾಣದ ಬಳಿಯ ಶುಭಾಷ್ ಮಾರ್ಗ್ ಸಿಗ್ನಲ್‌ನಲ್ಲಿ ಸಂಜೆ 7 ಗಂಟೆಗೆ ಭೀಕರ ನಿಗೂಢ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಎಲೆಕ್ಟ್ರಾನಿಕ್ ಆಟೊ ರಿಕ್ಷಾ ಸೇರಿದಂತೆ ಒಟ್ಟು 22 ವಾಹನಗಳು ಬೆಂಕಿಗಾಹುತಿಯಾಗಿವೆ.
ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಡೆಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಹಾಗೂ ತನಿಖೆಯನ್ನು ನಡೆಸಿವೆ.
ಈ ಸಂಬಂಧ ಪೊಲೀಸರಿಗೆ ಹ್ಯೂಂಡೈ ಐ20 ಕಾರಿನಲ್ಲಿ ಸ್ಪೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು ಕಾರಿನ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿವೆ.
ಘಟನೆ ಸಂಭವಿಸಿದ ಸುದ್ದಿ ತಿಳಿದ ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಮೈಸೂರಿನಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ ಘಟನೆ ಕುರಿತು ಮಾತನಾಡಿದ್ದಾರೆ. ದೆಹಲಿಯಲ್ಲಿ ಸ್ಪೋಟ ನಡೆದಿದ್ದು, ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಈ ಘಟನೆ ಬಗ್ಗೆ ನನಗೆ ಗೊತ್ತಾದ ಕೂಡಲೇ ಮೈಸೂರು ಪೊಲೀಸರ ಜತೆ ಮಾತನಾಡಿದ್ದೇನೆ, ಬೆಂಗಳೂರು ಪೊಲೀಸರ ಜತೆ ಸಹ ಮಾತನಾಡುತ್ತೇನೆ ಎಂದರು.
ರಾಜ್ಯ ಮಟ್ಟದ ಐಜಿಪಿ, ಡಿಜಿಪಿ ಜತೆ ಮಾತನಾಡುತ್ತೇನೆ. ಒಟ್ಟಾರೆಯಾಗಿ ಇಡೀ ರಾಜ್ಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳು, ಬೆಂಗಳೂರು ನಗರ, ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು ಎನ್ನುವ ಸೂಚನೆಯನ್ನು ಈಗಾಗಲೇ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನು ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ ಸಿದ್ದರಾಮಯ್ಯ ಕುಟುಂದವರಿಗೆ ಸಂತಾಪವನ್ನು ಸೂಚಿಸಿದರು.














