ಸಮಾಜ ಒಗ್ಗೂಡಿಸುವುದೇ ಸಂಘದ ಗುರಿ, ಆರ್‌ಎಸ್‌ಎಸ್ ಯಾರ ವಿರುದ್ಧವೂ ಇಲ್ಲ: ಮೋಹನ್ ಭಾಗವತ್ – ಕಹಳೆ ನ್ಯೂಸ್

ಬೆಂಗಳೂರು: ಸಂಘವು ಸಮಾಜದಲ್ಲಿ ಒಗ್ಗೂಡಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು ನಾಶ ಮಾಡುವ ಅಥವಾ ವಿರೋಧಿಸುವುದಕ್ಕಾಗಿ ರಚನೆಯಾಗಿಲ್ಲ. ನಮ್ಮ ಪೂರ್ವಿಕರು ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಬಳಸಿದ ದಾರಿಗಳನ್ನೇ ಅಳವಡಿಸಿಕೊಂಡು, ಸಮಾಜದಲ್ಲಿನ ನ್ಯೂನತೆಗಳನ್ನು ಹೋಗಲಾಡಿಸುವುದು ಸಂಘದ ಉದ್ದೇಶ.
ಉತ್ತಮ ವ್ಯಕ್ತಿಗಳನ್ನು ಸೃಷ್ಟಿಸುವ ಮೂಲಕ ಸಮಾಜ ಕಟ್ಟುವುದು ಸಂಘದ ಸಂಕಲ್ಪ ಎಂದು ಆರ್‌ಎಸ್‌ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ನಗರದ ಪಿಇಎಸ್ ಕಾಲೇಜಿನಲ್ಲಿ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸ ‘ನವ ಕ್ಷಿತಿಜಗಳು’ ಕಾರ್ಯಕ್ರಮದಲ್ಲಿ ಸಂಘ ನಡೆದು ಬಂದ ಹಾದಿ ಮತ್ತು ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಪ್ರತ್ಯೇಕ ಎರಡು ಉಪನ್ಯಾಸಗಳನ್ನು ಅವರು ನೀಡಿದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆರ್‌ಎಸ್‌ಎಸ್‌ನ ಚಿತ್ರಣವನ್ನು ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಮ್ಮದು ವಿಶಿಷ್ಟ ಸಂಘಟನೆ. ನಮ್ಮ ಸಂಘಟನೆಯ ಜೊತೆ ಸಾಮ್ಯತೆ ಹೊಂದಿರುವ ಬೇರೆ ಸಂಘಟನೆ ಜಗತ್ತಿನಲ್ಲಿಲ್ಲ. ನಮ್ಮದು ಸಮಾಜಕ್ಕೆ ಅತ್ಯಂತ ಅವಶ್ಯಕ ಅಗತ್ಯಗಳನ್ನು ನೀಡುವ ಸಂಘಟನೆ. ಸಂಘಟಿತ ಸಮಾಜ ರೂಪಿಸುವುದು ಆರ್‌ಎಸ್‌ಎಸ್‌ನ ಗುರಿ. ಸಂಘಟಿತ ಸಮಾಜವನ್ನು ರೂಪಿಸುವುದು ಎಂದರೆ ಇನ್ನೊಬ್ಬರ ವಿರುದ್ಧ ಸಂಘಟಿತರಾಗುವುದಲ್ಲ, ಹಾಗೆಯೇ ಈ ಸಂಘಟನೆ ಇನ್ನೊಬ್ಬರಿಗೆ ಪ್ರತಿಕ್ರಿಯೆಯಲ್ಲ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದರು.
ಒಗ್ಗಟ್ಟಿರುವ ಸಮಾಜ ನಿರ್ಮಿಸಿದರಷ್ಟೇ ದೇಶಕ್ಕೆ ಬಲ:
ನಮ್ಮ ಮೇಲೆ ಆಕ್ರಮಣಗಳು ನಡೆದ ಸುದೀರ್ಘ ಇತಿಹಾಸವಿದೆ. ಕೊನೆಯ ಬಾರಿಗೆ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ಮಾಡಿ ಸ್ವತಂತ್ರರಾದೆವು. ಇಷ್ಟೊಂದು ಸಮೃದ್ಧಿ ಹೊಂದಿರುವ ನಾವು ದೇಶವಾಗಿ ಏಕೆ ಸೋತೆವು ಎಂಬ ಚಿಂತನೆಯನ್ನು ಹಲವರು ನಡೆಸಿದರು. ನಮ್ಮಲ್ಲಿ ರಾಜರು, ಧೀರ ನಾಯಕರು, ಒಗ್ಗಟ್ಟು ಎಲ್ಲವೂ ಇದ್ದು ಏಕೆ ಸೋತೆವು ಎಂಬ ವಿಚಾರದ ವಿಮರ್ಶೆ ನಡೆಯಿತು. ಈ ಮಧ್ಯೆ ಒಗ್ಗಟ್ಟಿರುವ ಸಮಾಜ ನಿರ್ಮಾಣ ಮಾಡಿದರೆ ಮಾತ್ರ ದೇಶ ಭವಿಷ್ಯದಲ್ಲಿಯೂ ಬಲಿಷ್ಠವಾಗಿ ಉಳಿಯಬಲ್ಲದು ಎಂಬ ಚಿಂತನೆಯಲ್ಲಿ ಆರ್‌ಎಸ್‌ಎಸ್ ಜನ್ಮ ತಾಳಿತು ಎಂದು ಮೋಹನ್ ಭಾಗವತ್ ಹೇಳಿದರು.
ಭಾರತಿಯರೆಲ್ಲರೂ ಹಿಂದುಗಳೇ ಆಗಿದ್ದಾರೆ. ನಮ್ಮ ಪೂರ್ವಜರು ಮತ್ತು ನಮ್ಮ ಸಂಸ್ಕೃತಿ ಒಂದೇ ಆಗಿದೆ. ಪೂಜಾ ಪದ್ಧತಿಗಳು ಬೇರೆ ಬೇರೆಯಾಗಿರಬಹುದು. ಆದರೆ, ನಮ್ಮ ಗುರುತು ಒಂದೇ ಎಂದು ಮೋಹನ್ ಭಾಗವತ್ ತಿಳಿಸಿದರು.
ನಮ್ಮಲ್ಲಿನ ವೈವಿಧ್ಯತೆ ನಮಗೆ ಅಡ್ಡಿಯಲ್ಲ. ಆ ವೈವಿಧ್ಯತೆಯ ಮಧ್ಯೆಯೇ ನಾವು ಏಕತೆಯನ್ನು ಕಾಪಾಡಿಕೊಳ್ಳಬೇಕು. ವೈಯಕ್ತಿಕ ಸ್ವಭಾವದ ಜೊತೆಗೆ ರಾಷ್ಟ್ರದ ಸ್ವಭಾದದ ಶ್ರೇಷ್ಠತೆಗೆ ಶ್ರಮಿಸಬೇಕು. ವೈಯಕ್ತಿಕವಾಗಿ ಒಳ್ಳೆಯವಾಗಿದ್ದು ರಾಷ್ಟ್ರ ಹಿತಾಸಕ್ತಿಗೆ ಪೂರಕವಾಗಿರದಿದ್ದರೆ, ಅಥವಾ ವೈಯಕ್ತಿಕವಾಗಿ ಕೆಟ್ಟವರಾಗಿದ್ದು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದ್ದರೆ ಪ್ರಯೋಜನವಿಲ್ಲ. ನಮ್ಮ ನಾಯಕತ್ವ, ನೀತಿ ಮತ್ತು ಸಿದ್ಧಾಂತಗಳನ್ನು ಸಮಾಜ ಸ್ವೀಕರಿಸಬೇಕು ಎಂದು ಅವರು ಹೇಳಿದರು.
ಬಾಯ್ಮಾತಿನ ಟೀಕೆ, ಹೃದಯಲ್ಲಿ ಗೌರವ:
ಸಂಘದ ವಿರೋಧಿಗಳು ಸಹ ಬಾಯಿಯಲ್ಲಿ ಮಾತ್ರ ನಮ್ಮನ್ನು ಟೀಕಿಸುತ್ತಾರೆ. ಆದರೆ, ಹೃದಯದಲ್ಲಿ ಸಂಘದ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ಸಂಘದ ವಿರೋಧಿಗಳು, ನಿಂದಕರಿಗೂ ಸಂಘ ಏನು ಎಂಬುದು ಗೊತ್ತಿದೆ. ಸಮಾಜ ಸಂಘದ ಪರವಾಗಿದೆ ಎಂದು ಹೇಳುವ ಮೂಲಕ ಸಂಘದ ಬಗ್ಗೆಗಿನ ಟೀಕೆಗಳಿಗೆ ಸಂಘವು ತಲೆ ಕೆಡಿಸಿಕೊಳ್ಳುವುದಿಲ್ಲ ಸಂದೇಶವನ್ನು ಪರೋಕ್ಷವಾಗಿ ನೀಡಿದರು.
ಸಮವಸ್ತ್ರ ಧರಿಸಿ ಎಂದು ಬಯಸಲ್ಲ, ಒಳ್ಳೇ ಕೆಲಸ ಮಾಡಿ:
ಸಂಘಕ್ಕೆ ಶತಕ ತುಂಬಿದೆ ಎಂಬುದು ಸಂತಸ ಮತ್ತು ಹೆಮ್ಮೆಯ ವಿಚಾರವೇ. ಆದರೆ ನಮ್ಮ ಕೆಲವು ಕೆಲಸಗಳನ್ನು ಮಾಡಲು ಇಷ್ಟು ಸಮಯ ತೆಗೆದುಕೊಳ್ಳಬೇಕಾಯಿತೇ ಎಂಬ ವಿಮರ್ಶೆ ಮಾಡಿಕೊಳ್ಳಲು ಸಹ ಇದು ಸಕಾಲ. ಇನ್ನು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಜನರು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅವರು ನಮ್ಮವರೇ ಎಂದು ನಾವು ಭಾವಿಸುತ್ತೇವೆ. ಎಲ್ಲರೂ ಸಮವಸ್ತ್ರ ಧರಿಸಬೇಕು ಎಂದು ಸಂಘ ಬಯಸುವುದಿಲ್ಲ. ದೇಶದ ಜನರಿಗೆ ಸೇವೆ ಮಾಡುವ ಬದ್ಧತೆಯನ್ನು ಸೃಷ್ಟಿಸುವ ಪರಿಸರವನ್ನು ನಾವು ಸೃಷ್ಟಿಸುತ್ತೇವೆ ಎಂದು ಮೋಹನ್ ಭಾಗವತ್ ಹೇಳಿದರು.
ಧನಾತ್ಮಕತೆ ಒತ್ತು ನೀಡಲು ಸಂಘ ಪ್ರಯತ್ನ
ಸಂಘದ ಕಾರ್ಯಕರ್ತರು ಪ್ರತಿ ಮನೆಗೂ ತಲುಪಬೇಕು, ದೇಶವ್ಯಾಪಿ ಚರ್ಚೆ, ಸಂವಾದಕ್ಕೆ ಅವಕಾಶ ಕಲ್ಪಿಸಬೇಕು. ಸಮಾಜದ ಎಲ್ಲ ವರ್ಗದ ಜೊತೆಗೆ ಸಂವಾದ ನಡೆಸಬೇಕು. ದೇಶದ ನಿರ್ಮಾಣದ ಪ್ರಯತ್ನಗಳು ವೈಯಕ್ತಿಕ ನೆಲೆಯಿಂದ ರಾಷ್ಟ್ರೀಯ ಪ್ರಯತ್ನವಾಗುವ ಮಟ್ಟಕ್ಕೆ ಬೆಳೆಯಬೇಕು. ಸಮಾಜದಲ್ಲಿ ಋಣಾತ್ಮಕತೆ ಹೆಚ್ಚುತ್ತಿದ್ದು ಅದನ್ನು ಕಡಿಮೆ ಮಾಡಿ ಧನಾತ್ಮಕತೆ ಒತ್ತು ನೀಡಲು ಸಂಘ ಪ್ರಯತ್ನ ನಡೆಸುತ್ತಿದೆ. ದುರ್ಬಲ ವರ್ಗಗಳನ್ನು ತಲುಪಲು ಶ್ರಮಿಸಿಬೇಕು. – ಮೋಹನ್ ಭಾಗವತ್, ಆರೆಸ್ಸೆಸ್ ಸರ ಸಂಘಚಾಲಕ













