
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್ (RSS) ಈ ದೇಶಕ್ಕೆ ಇಬ್ಬರು ಜನಪ್ರಿಯ ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅದನ್ನು ಬ್ಯಾನ್ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಅವರು ಆರ್‌ಎಸ್‌ಎಸ್ ಬ್ಯಾನ್ ಮಾಡಲು ಏಕೆ ಕಾರಣ ನೀಡುತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಪಾಟ್ನಾದಲ್ಲಿ ನಡೆದ ಬಿಹಾರ ಪವರ್ ಪ್ಲೇ ಸಮಾವೇಶದಲ್ಲಿ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಬ್ಯಾನ್‌ಗೆ ಯಾವುದೇ ಕಾರಣ ನೀಡಲಿಲ್ಲ. ಆರ್‌ಎಸ್‌ಎಸ್ ನನ್ನಂತಹ ಲಕ್ಷಾಂತರ ಯುವಕರಿಗೆ ದೇಶವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಸ್ಫೂರ್ತಿ ನೀಡಿದ ಸಂಘಟನೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದು ದೇಶಭಕ್ತಿ ಮತ್ತು ಶಿಸ್ತಿನ ಮೌಲ್ಯಗಳನ್ನು ನೀಡುತ್ತದೆ. ಮತ್ತು ಆರ್‌ಎಸ್‌ಎಸ್ ಈ ದೇಶಕ್ಕೆ ಇಬ್ಬರು ಜನಪ್ರಿಯ ಪ್ರಧಾನಿಗಳನ್ನು ನೀಡಿದೆ ಎಂಬುದನ್ನು ನಾವು ಗಮನಿಸಬೇಕು ಎಂದರು.
ಆರ್‌ಎಸ್‌ಎಸ್ ಈ ದೇಶಕ್ಕೆ ನೀಡಿದ ಇಬ್ಬರು ಅತ್ಯುತ್ತಮ ಪ್ರಧಾನಿಗಳೆಂದರೆ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ. ಅವರಿಬ್ಬರೂ ಈ ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡಬಹುದು. ದೇಶದ ಅಭಿವೃದ್ಧಿಗೆ, ಸಮಾಜಕ್ಕೆ ಸರಿಯಾದ ದಿಕ್ಕನ್ನು ತೋರಿಸಲು, ದೇಶದಲ್ಲಿ ಜನರನ್ನು ಒಟ್ಟುಗೂಡಿಸಲು, ಯುವಕರನ್ನು ತಮಗಾಗಿ ಮಾತ್ರವಲ್ಲದೆ ದೇಶಕ್ಕೂ ಮುಡಿಪಾಗಿಸಲು ಆರ್‌ಎಸ್‌ಎಸ್ ನೀಡಿದ ಕೊಡುಗೆ ದೊಡ್ಡದು. ಖರ್ಗೆ ಅವರ ಉದ್ದೇಶ ನನಗೆ ಅರ್ಥವಾಗಿದೆ, ಆದರೆ ಅದು ಎಂದಿಗೂ ಈಡೇರುವುದಿಲ್ಲ ಎಂದು ಅಮಿತ್ ಶಾ ಹೇಳಿದರು.
ಶುಕ್ರವಾರ, ಮಲ್ಲಿಕಾರ್ಜುನ ಖರ್ಗೆ ಅವರು ಭಾರತದ ಮೊದಲ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಮಂಡಿಸಿದ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಗೌರವಿಸಿದರೆ, ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎಂದು ಹೇಳಿದ್ದರು.
ಇವು ನನ್ನ ವೈಯಕ್ತಿಕ ಅಭಿಪ್ರಾಯಗಳು ಮತ್ತು ನಾನು ಬಹಿರಂಗವಾಗಿ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಬೇಕು ಎನ್ನುತ್ತಿದ್ದೇನೆ. ವಲ್ಲಭಭಾಯಿ ಪಟೇಲ್ ಮಂಡಿಸಿದ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಗೌರವಿಸುತ್ತಾರೆ ಎಂದಾದರೆ ಆರ್‌ಎಸ್‌ಎಸ್ ಬ್ಯಾನ್ ಮಾಡಿ. ದೇಶದಲ್ಲಿರುವ ಎಲ್ಲಾ ತಪ್ಪುಗಳು ಮತ್ತು ಇಲ್ಲಿನ ಎಲ್ಲಾ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಉಂಟಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಕಾಂಗ್ರೆಸ್ ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ ನಂತರ ಕಾಂಗ್ರೆಸ್ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.













