
ಹಿಂಗಾರು ಪ್ರವೇಶ ಹಾಗೂ ಅಗ್ನೇಯ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತವು ಕಳೆದ ಆರು ಗಂಟೆಯ ಅವಧಿಯಲ್ಲಿ ನಿಧಾನವಾಗಿ 5 ಕಿ.ಮೀ ವೇಗದಲ್ಲಿ ಈಶಾನ್ಯ ದಿಕ್ಕಿಗೆ ಚಲಿಸಿದೆ. ಇನ್ನು ಮುಂದಿನ 10 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗಲಿದ್ದು, 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಉತ್ತರ ಒಳನಾಡು ತಮಿಳುನಾಡು ಹಾಗೂ ತಮಿಳುನಾಡಿನ ಪಕ್ಕದ ದಕ್ಷಿಣ ಒಳನಾಡು ಕರ್ನಾಟಕದ ಮೇಲಿನ ಕಡಿಮೆ ಒತ್ತಡ ಪ್ರದೇಶವು ಪಶ್ಚಿಮ ವಾಯುವ್ಯ ದಿಕ್ಕಿಗೆ ಚಲಿಸಿ, ಕರ್ನಾಟಕ ಮತ್ತು ಕರ್ನಾಟಕದ ಸುತ್ತಮುತ್ತಲಿನ ಪ್ರದೇಶದಲ್ಲಿ ರೂಪುಗೊಂಡಿದೆ. ಇನ್ನು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಹಾಗೂ ಇನ್ನೆಷ್ಟು ದಿನ ಮಳೆ ಆಗಲಿದೆ ಎನ್ನುವ ವಿವರ ನೋಡೋಣ.
ವಾಯುಭಾರ ಕುಸಿತದ ಪರಿಣಾಮದಿಂದಾಗಿ ಮುಂದಿನ 10 ದಿನಗಳ ವರೆಗೆ ರಾಜ್ಯದಲ್ಲಿ ಮಳೆ ಆರ್ಭಟ ಇರಲಿದೆ. 7 ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಈ ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಇರಲಿದೆ. ಕರ್ನಾಟಕದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆ ಇರಲಿದೆ. ಅಲ್ಲದೇ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಬೆಂಗಳೂರು ನಗರ ಭಾಗದಲ್ಲೂ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಬೀದರ್, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಐಎಂಡಿ ವರದಿ ಉಲ್ಲೇಖಿಸಿದೆ.
ಇನ್ನು ಕಳೆದ 24 ಗಂಟೆಯ ಅವಧಿಯಲ್ಲಿ ಗರಿಷ್ಠ ತಾಪಮಾನವು 33.8 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ಅಲ್ಲದೇ ರಾಜ್ಯದ ಸಮತಟ್ಟದ ಪ್ರದೇಶಗಳಲ್ಲಿ ಅತೀ ಕನಿಷ್ಠ ತಾಪಮಾನವು 19 ಡಿಗ್ರಿ ಸೆಲ್ಸಿಯಸ್ ಮೈಸೂರಿನಲ್ಲಿ ದಾಖಲಾಗಿದೆ.













