
ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಗೆ ರೈಲ್ವೆ ಹಳಿಗೆ ಹಾಕಿದ್ದ ಜಲ್ಲಿ ಕಲ್ಲು ಕೊಚ್ಚಿ ಹೋದ ಘಟನೆ ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ಹಳಿಯಲ್ಲಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿದ್ದವು.
ಚಿಕ್ಕಮಗಳೂರಿನಿಂದ ಶಿವಮೊಗ್ಗ ಕಡೆಗೆ ಹೊರಟ್ಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಬಳಿ ಆಗಮಿಸುತ್ತಿದ್ದಂತೆ ರೈಲ್ವೇ ಸಿಬ್ಬಂದಿ ತಕ್ಷಣ ನಿಲ್ಲಿಸುವಂತೆ ಲೋಕೋ ಪೈಲಟ್‌ಗೆ ಮಾಹಿತಿ ನೀಡುವ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ.
ತಕ್ಷಣ ಎಚ್ಚೆತ್ತ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದು ಈ ವೇಳೆ ರೈಲ್ವೇ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡ 30 ನಿಮಿಷಗಳ ಬಳಿಕ ರೈಲು ಶಿವಮೊಗ್ಗದತ್ತ ಪ್ರಯಾಣ ಬೆಳೆಸಿತು.













