
ಮಾರಿಷಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ನಂದನ ಎಸ್. ಭಟ್ ಎಂಬುವವರು ಮೃತಪಟ್ಟಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಳ್ಯಕ್ಕೆ ಅವರ ಮೃತದೇಹ ತರಲು ಸಂಬಂಧಿಕರು ಮತ್ತು ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಘಟನೆ ಸೋಮವಾರ ನಡೆದಿದೆ ಎನ್ನಲಾಗಿದ್ದು, ಮೃತದೇಹವನ್ನು ಅಲ್ಲಿನ ಸರಕಾರಿ ವ್ಯವಸ್ಥೆ ಮೂಲಕ ಹಾಗೂ ಇಲ್ಲಿನ ಸರಕಾರದ ಸಹಾಯದಿಂದ ಕರೆತರಲು ವ್ಯವಸ್ಥೆ ಮಾಡುವಂತೆ ಮೃತ ಯುವಕನ ತಾಯಿಯ ತಮ್ಮ ಕಾರ್ಕಳದ ಸತ್ಯನಾರಾಯಣ ಭಟ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿ ಪೂರಕ ಕ್ರಮಕ್ಕೆ ವಿನಂತಿಸಿದ್ದಾರೆ ಎನ್ನಲಾಗಿದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೂಡ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ. ನಂದನ ಅವರು ಮಾರಿಷಸ್ ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆಂಡ್ ಟೂರಿಸಮ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ














