ರಾಜ್ಯದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ : 1 ದಿನ ‘ಋತುಚಕ್ರ ‘ ರಜೆ ನೀಡಲು ಸರ್ಕಾರದಿಂದ ಮಸೂದೆ ಮಂಡನೆ -ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ ತಿಂಗಳಲ್ಲಿ ಒಂದು ದಿನ ಸರ್ಕಾರಿ, ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಋತುಚಕ್ರ ರಜೆಯನ್ನು ಘೋಷಿಸಲಾಗಿತ್ತು. ಅದರಂತೆ ಶೀಘ್ರದಲ್ಲೇ ನೀತಿ ರೂಪಿಸಿ, ಆದೇಶ ಹೊರಡಿಸಲಿದೆ.
ಈ ಕುರಿತಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದು, ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವುದನ್ನು ಜಾರಿ ಮಾಡಲು ನಿಯಮ ರೂಪಿಸಲಾಗುವುದು.
ಸರ್ಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇಬೇಕು. ಈ ನೀತಿ ಜಾರಿ ಸಂಬಂಧ ಮಸೂದೆ ಮಂಡಿಸಲಾಗುವುದು ಅಥವಾ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದಿದ್ದಾರೆ.
ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಖಾಸಗಿ ಕಂಪನಿ, ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋತು ಚಕ್ರ ರಜೆ ನೀತಿ 2025 ಜಾರಿಗೆ ಸರ್ಕಾರ ನಿರ್ಧರಿಸಿದೆ.













