
ವಾಷಿಂಗ್ಟನ್ : 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ‘ಮಿಸೆಸ್ ಯೂನಿವರ್ಸ್’ ಕಿರೀಟ ಲಭಿಸಿದೆ. ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು ಮಿಸೆಸ್ ಯೂನಿವರ್ಸ್ ಆಗಿ ಗೆದ್ದಿದ್ದಾರೆ.
ಫಿಲಿಪ್ಪೀನ್ಸ್‌ನಲ್ಲಿ ನಡೆದ 48ನೇ ಆವೃತ್ತಿಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶೆರಿ ಸಿಂಗ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ 48ನೇ ಆವೃತ್ತಿಯ ಮಿಸೆಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆ ನಡೆಯಿತು.
ಪ್ರಶಸ್ತಿ ಗೆದ್ದ ಮೊದಲ ಭಾರತೀಯಳೆಂಬ ಹೆಗ್ಗಳಿಕೆ ಶೆರಿ ಸಿಂಗ್ ಅವರದು. ಇತರ ಅಂತಿಮ ಸ್ಪರ್ಧಿಗಳು ಯುಎಸ್ಎ, ಜಪಾನ್, ಮ್ಯಾನ್ಮಾರ್, ಬಲ್ಗೇರಿಯಾ, ಯುಎಇ, ಆಫ್ರಿಕಾ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸಿದ್ದರು. 120 ಸ್ಪರ್ಧಿಗಳು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನ ಸ್ಪರ್ಧಿ ಮೊದಲ ರನ್ನರ್ ಅಪ್, ಫಿಲಿಪ್ಪೀನ್ಸ್‌ನ ಸ್ಪರ್ಧಿ 2ನೇ ರನ್ನರ್ ಅಪ್ ಆದರು.
ತನ್ನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶೆರಿ ಸಿಂಗ್, ದಶಕಗಳ ಕನಸು ಇಂದು ನನಸಾಗಿದೆ. ಭಾರತವು ತನ್ನ ಮೊದಲ ಮಿಸೆಸ್ ಯೂನಿವರ್ಸ್ ಕಿರೀಟವನ್ನು ಅಧಿಕೃತವಾಗಿ ಗೆದ್ದುಕೊಂಡಿದೆ. ಈ ಗೆಲುವು ಕೇವಲ ಶೆರಿಯದ್ದಲ್ಲ, ಇದು ಕಠಿಣ ಪರಿಶ್ರಮ, ಭಾರತದ ಅಚಲ ಮನೋಭಾವದ ಸಂಕೇತವಾಗಿದೆ ಎಂದು ಹೇಳಿದ್ದಾರೆ














