ಕೊಪ್ಪಳ |ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ; 35 ಟನ್ ರೇಷನ್ ಸಾಗಿಸ್ತಿದ್ದ ಲಾರಿ ವಶಕ್ಕೆ-ಕಹಳೆ ನ್ಯೂಸ್

ಕೊಪ್ಪಳ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಭ್ರಷ್ಟರ ಪಾಲಾಗುತ್ತಿದೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳರು ಅಕ್ರಮವಾಗಿ ಕದ್ದು ಮಾರಾಟ ಮಾಡಲು ಮುಂದಾದ ಲಾರಿಯನ್ನು ಕೊಪ್ಪಳದ ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ 16 ರಂದು ಬೆಳಗಿನ ಜಾವ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿ ಪೊಲೀಸರು ಲಾರಿಯನ್ನು ತಡೆಯುತ್ತಿದ್ದಂತೆ ಚಾಲಕ ಲಾರಿಯನ್ನ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಲಾರಿಯಲ್ಲಿರುವ ಅಕ್ಕಿ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬುದನ್ನು ಮುನಿರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಆಹಾರ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿರೋ ಅಕ್ಕಿಯ ಲೆಕ್ಕ ಕೊಡುವಾಗ 8 ಟನ್ ಎಂದು ತೋರಿಸಿ ಪೊಲೀಸ್ ಇಲಾಖೆಗೆ ಮಂಕು ಬೂದಿ ಎರಚಲು ಮುಂದಾಗಿದ್ದಾರೆ. 16 ಚಕ್ರದ ವಾಹನದ ಸಾಮರ್ಥ್ಯ 35 ಟನ್, ಪೂರ್ತಿ ಲೋಡೆಡ್ ಲಾರಿಯಲ್ಲಿ 8 ಟನ್ ಮಾತ್ರ ಇದೆ ಎಂದು ಪೊಲೀಸ್ ಇಲಾಖೆಗೆ ಆಹಾರ ನಿರೀಕ್ಷಕ ರವಿಚಂದ್ರ ಲೆಕ್ಕ ಕೊಟ್ಟಿದ್ದಾರೆ.














