ಏರ್ ಇಂಡಿಯಾ ವಿಮಾನ ; ಪತನ ಕೇಸ್ ಬೋಯಿಂಗ್, ಹನಿವೆಲ್ ವಿರುದ್ಧ ಮೃತರ ಕುಟುಂಬಗಳಿಂದ ಮೊಕದ್ದಮೆ-ಕಹಳೆ ನ್ಯೂಸ್

ವಾಷಿಂಗ್ಟನ್: ಜೂನ್ ತಿಂಗಳಲ್ಲಿ ಏರ್ ಇಂಡಿಯಾ ಫ್ಲೈಟ್ 171 ಪತನವಾಗಿ ಮೃತಪಟ್ಟವರ ಕುಟುಂಬಸ್ಥರು ಈಗ ಕಾನೂನು ಸಮರ ಸಾರಿದ್ದಾರೆ.
ಬೋಯಿಂಗ್ ಮತ್ತು ವಿಮಾನ ಬಿಡಿಭಾಗಗಳ ತಯಾರಕ ಹನಿವೆಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ಹೂಡಿದ್ದಾರೆ. ಕಂಪನಿಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ಸಲ್ಲಿಸಲಾದ ಮೊಕದ್ದಮೆಯಲ್ಲಿ ದೋಷಪೂರಿತ ಇಂಧನ ಸ್ವಿಚ್‌ಗಳು ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ವಿಮಾನದ ವಿನ್ಯಾಸದ ಅಪಾಯಗಳ ಬಗ್ಗೆ ತಿಳಿದಿದ್ದರೂ ಕಂಪನಿಗಳು ಏನನ್ನೂ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ 171, ಬೋಯಿಂಗ್ 787, ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 260 ಜನರು ಸಾವನ್ನಪ್ಪಿದ್ದಾರೆ.
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ಗಳಿಗೆ ಇಂಧನ ಕಡಿತಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೋಯಿಂಗ್ ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳು ಸುರಕ್ಷಿತವೆಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಈ ಹಿಂದೆ ಹೇಳಿತ್ತು. ಈಗ ಇಂಧನ ಸ್ವಿಚ್‌ಗಳ ಬಗ್ಗೆ ತನಿಖಾಧಿಕಾರಿಗಳ ಗಮನ ಕೇಂದ್ರೀಕರಿಸಿದೆ.














