ಮಂಗಳೂರು: ರಸ್ತೆ ಗುಂಡಿಯಿಂದ ಅಪಘಾತ, ಮೀನು ಸಾಗಣೆ ಲಾರಿಯಡಿ ಸಿಲುಕಿ ಮಹಿಳೆ ಸಾವು – ಕಹಳೆ ನ್ಯೂಸ್

ಮಂಗಳೂರು: ನಗರದ ಕೊಟ್ಟಾರ ಚೌಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಸ್ಕೂಟರ್ ನಲ್ಲಿ ಸಾಗುತ್ತಿದ್ದ ಮಹಿಳೆಯು ಗುಂಡಿ ತಪ್ಪಿಸುವ ಭರದಲ್ಲಿ ಹೆದ್ದಾರಿಗೆ ಉರುಳಿ ಬಿದ್ದಿದ್ದರು.
ಈ ವೇಳೆ ಕೂಳೂರು ಕಡೆಯಿಂದ ಸಾಗಿ ಬಂದ ಮೀನಿನ ಲಾರಿ ಅವರ ಮೇಲೆ ಹರಿದಿತ್ತು.
ಉಡುಪಿ ಜಿಲ್ಲೆಯ ಪರ್ಕಳದ ಮಾಧವಿ (38 ) ಮೃತ ಮಹಿಳೆ. ಅವರು ನಗರದ ಹೊರವಲಯದ ಚಿತ್ರಾಪುರದಲ್ಲಿ ನೆಲೆಸಿದ್ದರು.
ಕುಂಟಿಕಾನದ ಎ.ಜೆ ಆಸ್ಪತ್ರೆಯ ರಕ್ತ ನಿಧಿಯಲ್ಲಿ ಟೆಕ್ನಿಷಿಯನ್ ಆಗಿದ್ದ ಅವರು ಬೆಳಿಗ್ಗೆ ಚಿತ್ರಾಪುರದಿಂದ ನಗರಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.
ಹೆದ್ದಾರಿ ಗುಂಡಿ ಮುಚ್ಚದ್ದಕ್ಕೆ ಆಕ್ರೋಶ: ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅನೇಕ ಕಡೆ ಭಾರಿ ಗಾತ್ರದ ಗುಂಡಿಗಳು ಉಂಟಾಗಿವೆ. ಆದರೂ ಗುಂಡಿಗಳನ್ನು ದುರಸ್ತಿ ಪಡಿಸಲು ಕ್ರಮವಹಿಸದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.














