
ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ.
ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್-4 ಹಂತ ಪ್ರವೇಶಿಸಲಿವೆ. ಸೂಪರ್-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.
ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದು ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದರೆ 3 ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಸೆ.15ರ ಯುಎಇ-ಒಮಾನ್(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ.
ದುಬೈ ಕ್ರೀಡಾಂಗಣದಲ್ಲಿ 11 ಪಂದ್ಯ ನಡೆಯಿದ್ದು 25,000 ಆಸನ ಸಾಮರ್ಥ್ಯವನ್ನು ಹೊಂದಿದರೆ ಅಬುಧಾಬಿಯಲ್ಲಿ 8 ಪಂದ್ಯಗಳು ನಿಗದಿಯಾಗಿದ್ದು 20,000 ಆಸನ ಸಾಮರ್ಥ್ಯ ಹೊಂದಿದೆ.
ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
ಪಹಲ್ಗಾಮ್ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್ (India vs Pakistan) ತಂಡಗಳು ತಂಡಗಳು ಮುಖಾಮುಖಿಯಾಗಲಿವೆ. ಒಂದಲ್ಲ ಮೂರು ಬಾರಿ ಇತ್ತಂಡಗಳು ಕಾದಾಟ ನಡೆಸುವ ಸಾಧ್ಯತೆಯಿದೆ.
ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್ 4 ಪ್ರವೇಶಿಸಿದರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್ 4 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.














