Saturday, March 7, 2026
ಉಡುಪಿಕುಂದಾಪುರಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿಯ ಅನಿವಾರ್ಯತೆ ಇದೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ -ಕಹಳೆ ನ್ಯೂಸ್

ಕುಂದಾಪುರ: ಸಮಾಜದಲ್ಲಿ ವಿದ್ಯಾವಂತರು, ಬುದ್ದಿವಂತರು, ಜ್ಞಾನಿಗಳು ಮೌನವಹಿಸಿದರೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಚಟುವಟಿಕೆಗಳು ಸಮಾಜದಲ್ಲಿ ಚರ್ಚೆಗೆ ಬಾರದಿದ್ದರೆ ಒಳ್ಳೆಯ ಕೆಲಸಗಳು ನಿರ್ಲಿಪ್ತವಾಗುವ ಅಪಾಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಒಂದಷ್ಟು ಚರ್ಚೆಗಳು ಸಮಾಜ ಹಾಗೂ ಶಿಕ್ಷಕರ ಮಧ್ಯೆ ಆಗಬೇಕು. ನಮ್ಮ ಮುಂದಿನ ಪೀಳಿಗೆ ಶಕ್ತಿಯುತವಾಗಿ, ಭಾರತದ ಸದೃಢ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನಿವಾರ್ಯತೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯದ ನೇತೃತ್ವದಲ್ಲಿ ಶುಕ್ರವಾರ ನಗರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನ ಶಿಕ್ಷಣ ಪದ್ದತಿಯಲ್ಲಿ ಬದಲಾವಣೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಹಳ ಚರ್ಚೆಯಲ್ಲಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಶಿಕ್ಷಕರು ಮೌನವಾಗಿದ್ದುಕೊಂಡೆ, ಯಾವುದೇ ವಿವಾದಗಳಿಲ್ಲದೇ ಜಾಗೃತ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಬೇಕೋ ಬೇಡವೋ ಎನ್ನುವ ಚರ್ಚೆಯಲ್ಲಿ ನಾವು ಮುಳುಗಿದ್ದೇವೆ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ಒಂದಕ್ಕಿಂತ ಹೆಚ್ಚು ಸರ್ಕಾರಿ ಉದ್ಯೋಗಗಳು ಕೊಡಲು ಸಾಧ್ಯವೇ ಇಲ್ಲ. ಆರುವರೆ ಕೋಟಿ ಜನಸಂಖ್ಯೆಯಲ್ಲಿ ಕೇವಲ ಆರುವರೆ ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ಕೊಡಬಹುದು. ಶಿಕ್ಷಕರು ರಾಷ್ಟೀಯ ಶಿಕ್ಷಣ ನೀತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ರಾಷ್ಟೀಯ ಶಿಕ್ಷಣ ನೀತಿಯನ್ನು ಇಂದು ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಕೊಡುವ ಅನಿವಾರ್ಯತೆಯ ಮಧ್ಯೆ ಒಂದಷ್ಟು ರಾಜಕೀಯ ಸಂಘರ್ಷಗಳು ನಮ್ಮ ನಡುವೆ ನಡೆಯುತ್ತಿವೆ ಎಂದರು.

ಜಾಹೀರಾತು
ಜಾಹೀರಾತು

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪನ್ಯಾಸ ನೀಡಿ, ಪುಸ್ತಕ ಜ್ಞಾನಕ್ಕಿಂತ ಅನುಭವಗಳ ಜ್ಞಾನ ಮೇಲು ಎನ್ನುವ ಸತ್ಯ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅನುಭವದ ಜ್ಞಾನ ಬೆರೆತಾಗ ಮಾತ್ರ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಯಂತಲ್ಲ. ಇದು ಪವಿತ್ರ, ಶ್ರೇಷ್ಠ, ಗೌರವಯುತವಾದ ವೃತ್ತಿ. ಓರ್ವ ಶಿಕ್ಷಕ ನಿವೃತ್ತಿಯಾಗಿ ಕೊನೆಯುಸಿರೆಳೆಯುವ ತನಕವೂ ಆತನನ್ನು ಸಮಾಜ ಶಿಕ್ಷಕನಾಗಿಯೇ ಕಾಣುತ್ತದೆ. ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಿದಾಗ ವೃತ್ತಿಯ ಶ್ರೇಷ್ಠತೆಗೆ ತಲುಪುತ್ತೇವೆ. ವೃತ್ತಿಯ ಘನತೆ ಎತ್ತಿ ಹಿಡಿಯಲು ನಾವು ಸದಾ ಬದ್ದರಾಗಿರಬೇಕು. ಶಿಕ್ಷಕ ಪಾಠ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಗೆಲ್ಲಿಸಬಹುದು. ಶಿಕ್ಷಣ ಕೇವಲ ಪರೀಕ್ಷೆಯ ಅಂಕಗಳಿಗಲ್ಲ. ವಿದ್ಯಾರ್ಥಿಗಳಿಗೆ ಬದುಕನ್ನು ಎದುರಿಸಲು ಗಟ್ಟಿತನವನ್ನು ಕಲಿಸಿಕೊಡುವುದು ಒಂದು ರೀತಿಯ ಶಿಕ್ಷಣ ಎಂದರು.

ಬಿದ್ಕಲ್ ಕಟ್ಟೆಯ ಸಮೂಹ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ನಾಗರಾಜ್ ಆಚಾರ್ಯ ಅವರ ವಿದ್ಯಾರ್ಥಿಗಳಿಗಾಗಿ ಮಕ್ಕಳ ನೀತಿ ಕಥೆಯನ್ನು ಆಧರಿಸಿ ರಚಿಸಿದ ಛಂದೋಬದ್ದ ಯಕ್ಷಗಾನ “ಪ್ರಸಂಗ ಚಂದ್ರಚಮೂರ” ಪುಸ್ತಕವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಬಿಡುಗಡೆಗೊಳಿಸಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಬಂಟರ ಸಂಘದ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಶಿಕ್ಷಕರ ಸಂಘದ ಪ್ರಮುಖರಾದ ಗಣೇಶ್ ಕುಮಾರ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಶಿವರಾಮ್, ಕುಸುಮಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಎ. ಶಂಕರ್ ಐತಾಳ್, ನವೀನ್‌ಚಂದ್ರ ಹೆಗ್ಡೆ, ಉದಯ್ ಮಡಿವಾಳ, ಬಾಲಕೃಷ್ಣ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಪ್ರದೀಪ್ ಕುಮಾರ್ ಭಂಡಾರಿ, ಚಂದ್ರ ನಾಯ್ಕ್, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಪ್ರಸ್ತಾಪಿಸಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯ್ಕ್ ವಂದಿಸಿದರು. ಶಿಕ್ಷಕರಾದ ಶಶಿಧರ ಹಾಗೂ ಸಂತೋಷ ಶೆಟ್ಟಿ ನಿರೂಪಿಸಿದರು.