Tuesday, March 10, 2026
ಸುದ್ದಿ

ಶಬರಿಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕಾನೂನು ಮಾಡಬೇಕು: ಹಿಂದೂ ಸಂಘಟನ ಆಂದೋಲನ – ಕಹಳೆ ನ್ಯೂಸ್

ಪುತ್ತೂರು: ಶಬರಿಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕಾನೂನು ಮಾಡಬೇಕು ಹಾಗೂ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಹೇರಿದ ಅಪರಾಧಗಳನ್ನು ತಕ್ಷಣ ರದ್ದುಪಡಿಸಬೇಕು, ಹಿಂದೂಗಳ ಭಾವನೆಗಳು ಕೆರಳುವ ಮೊದಲು ಸರ್ಕಾರ ಸನ್ನಿ ಲಿಯೋನ್ ನಟಿಸುತ್ತಿರುವ ‘ವೀರಮ್ಮಾದೇವಿ’ ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.

ಬಲತ್ಕಾರ ಪ್ರಕರಣದ ಬಿಶಪ್ ಫ್ರೈಂಕೋ ಮುಲಕ್ಕಲ್ ಇವರ ಜಾಮೀನನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಆಂದೋಲನವನ್ನು ಆಯೋಜಿಸಲಾಗಿತ್ತು.
ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ದೇವಸ್ಥಾನದೊಳಗೆ ಪ್ರವೇಶ ಮಾಡಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಣಯವನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ನಂತರ ಕೇರಳ ರಾಜ್ಯದ ತಿರುವನಂತಪುರಮ್, ಕೊಲ್ಲಮ್, ಅಲಾಪ್ಪುಜಾ, ಪಠಾನಮತಿಟ್ಟಾ, ಎರ್ನಾಕುಲಮ್ ಮತ್ತು ಪಾಲಕ್ಕಾಡ್‌ನಲ್ಲಿ ಅನೇಕ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಮತ್ತು ಪುರುಷರು ಬ್ರಹತ್ಪ್ರಮಾಣದಲ್ಲಿ ನಿಷೇಧ ಮೆರವಣಿಗೆಗಳನ್ನು ಆಯೋಜಿಸಿಲಾಯಿತು ಹಾಗೂ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದರು. ಹೀಗೆ ಪ್ರತಿಭಟನೆ ಮಾಡಿದ 3500 ಕ್ಕಿಂತಲೂ ಹೆಚ್ಚು ಭಕ್ತರನ್ನು ಕೇರಳದ ಪೊಲೀಸರು ಬಂಧಿಸಿ ಅವರ ಮೇಲೆ ಅಪರಾಧಗಳನ್ನು ದಾಖಲಿಸಿದ್ದಾರೆ.
ಧರ್ಮಪರಂಪರೆಯ ರಕ್ಷಣೆಗಾಗಿ ಕಾನೂನು ಮಾರ್ಗದಲ್ಲಿ ಪ್ರತಿಭಟನೆ ಮಾಡುವ ಭಕ್ತರ ಮೇಲೆ ಅಪರಾಧವನ್ನು ದಾಖಲಿಸುವುದು ಹಾಗೂ ಅವರನ್ನು ಬಂಧಿಸುವುದು ದುರ್ಭಾಗ್ಯ ಹಾಗೂ ನಿಂದನೀಯ ವಿಷಯವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಭಕ್ತರ ಮೇಲೆ ದಾಖಲಿಸಿದ ಅಪರಾಧಗಳನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಶಬರೀಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆಗಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಕಾನೂನು ಮಾಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ದ.ಕ. ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ವಿನಂತಿಸಿದರು.
ಹಿಂದುತ್ವವಾದಿಗಳಾದ ಶ್ರೀ. ಮನ್ಮಥ ಶೆಟ್ಟಿ ಮಾತನಾಡಿ, ‘ದಕ್ಷಿಣ ಭಾರತದ ವೀರಾಂಗನೆ ‘ವೀರಮ್ಮಾದೇವಿ’ಯ ಜೀವನಾಧಾರಿತ ಪ್ರದರ್ಶನಗೊಳ್ಳಲಿರುವ ಚಲನಚಿತ್ರದಲ್ಲಿ ಕೆನಡಾದ ಪ್ರಜೆಯಾಗಿರುವ ‘ಪೋರ್ನ ನಟಿ’ ಮತ್ತು ಈಗಿನ ಭಾರತೀಯ ಚಲನಚಿತ್ರರಂಗದಲ್ಲಿ ಕುಪ್ರಸಿದ್ಧವಾಗಿರುವ ಸನ್ನಿ ಲಿಯೋನ್ ಹಿಂದೂ ಸಾಮ್ರಾಜ್ಞಿ ರಾಣಿ ‘ವೀರಮ್ಮಾದೇವಿ’ಯ ಪಾತ್ರವನ್ನು ನಿರ್ವಹಿಸಲಿದ್ದಾಳೆ. ಇದು ಅಕ್ಷಮ್ಯ ಹಾಗೂ ನಿಷೇದಾರ್ಹವಾಗಿದೆ.
ಈ ಚಲನಚಿತ್ರದ ಚಿತ್ರೀಕರಣ ಈಗ ಪ್ರಾರಂಭವಾಗಿದ್ದು, ಚಲನಚಿತ್ರವು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ಅನೇಕ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಸನ್ನಿ ಲಿಯೋನಳ ಪ್ರತಿಕೃತಿಯನ್ನು ಸುಟ್ಟಿದ್ದು, ನಿಷೇಧ ಆಂದೋಲನ ಮುಂತಾದವುಗಳ ಮುಖಾಂತರ ವಿರೋಧಿಸುತ್ತಿದ್ದಾರೆ. ಈ ಕಾರಣದಿಂದ ಹಿಂದೂಗಳ ಭಾವನೆ ಕೆರಳುವ ಪೂರ್ವದಲ್ಲಿಯೇ ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ಸನ್ನಿ ಲಿಯೋನ ನಟಿಸುತ್ತಿರುವ ‘ವೀರಮ್ಮಾದೇವಿ’ ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು, ಚಲನಚಿತ್ರದ ಚಿತ್ರೀಕರಣಕ್ಕಾಗಿ ನೀಡಲಾಗುವ ಎಲ್ಲ ಅನುಮತಿಗಳನ್ನು ರದ್ದುಗೊಳಿಸಬೇಕು.
ಅಲ್ಲದೇ, ಅವಶ್ಯಕತೆ ಎನಿಸಿದಲ್ಲಿ ಕೇಂದ್ರ ಸರಕಾರವು ಈ ಚಲನಚಿತ್ರವನ್ನು ನಿರ್ಬಂಧಿಸಬೇಕು, ಒಂದು ವೇಳೆ ಸರಕಾರವು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸದೇ ಇದ್ದಲ್ಲಿ , ಇದಕ್ಕಿಂತ ತೀವ್ರ ಸ್ವರೂಪದ ವ್ಯಾಪಕವಾಗಿ ಪ್ರತಿಭಟನೆಯನ್ನು ಜರುಗಿಸಲಾಗುವುದೆಂದು ಎಚ್ಚರಿಕೆಯನ್ನು  ಸಹ ನಾವು ನೀಡುತ್ತಿದ್ದೇವೆ’ ಎಂದರು.
ಇದೇ ಸಮಯದಲ್ಲಿ ಕೇರಳದ ನನ್ ಮೇಲಾಗಿರುವ  ಬಲತ್ಕಾರ ಪ್ರಕರಣದಲ್ಲಿನ ಮುಖ್ಯ ಸಾಕ್ಷಿದಾರರಾಗಿದ್ದ ಫಾದರ್ ಕುರಿಯಾಕೋಸ್ ಇವರ ಸಂಶಯಾಸ್ಪದ ಮರಣದ ತನಿಖೆ ಮಾಡಬೇಕು ಹಾಗೂ ಆರೋಪಿ ಬಿಶಪ್ ಫ್ರೈಂಕೋ ಮುಲಕ್ಕಲ್ ಇವರ ಜಾಮೀನನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯೊಂದಿಗೆ ಘೋಷಣೆಗಳನ್ನು ಕೂಗಲಾಯಿತು.
ಆಂದೋಲನದ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೇಂದ್ರ ಗೃಹಮಂತ್ರಿಗಳಿಗೆ ಪುತ್ತೂರು ಉಪವಿಭಾಧಿಕಾರಿಗಳ ಮೂಲಕ ಮನವಿ ನೀಡುವುದೆಂದು ನಿರ್ಧರಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಜನಾರ್ದನ ಗೌಡ, ಶ್ರೀ. ದಯಾನಂದ ಹೆಗ್ಡೆ, ಶ್ರೀ. ಹರಿಪ್ರಸಾದ್ ಶೆಟ್ಟಿ, ಶ್ರೀ. ಸಂತೋಷ್ ಬೊಳುವಾರು ಮೊದಲಾದವರು ಉಪಸ್ಥಿತರಿದ್ದರು. ಆಂದೋಲನದ ‌ ನಿರೂಪಣೆಯನ್ನು ಸೌ.‌ಪಾರ್ವತಿ, ಸೌ. ವಂದನಾ ಇವರು ಮಾಡಿದರು. ಶಂಖನಾದ ಮೊಳಗಿಸುವ ಮೂಲಕ ಪ್ರತಿಭಟನೆ ಆರಂಭಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು