
– ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್
ವಾಷಿಂಗ್ಟನ್:ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್ ಕೋರ್ಟ್ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ.
ಟ್ರಂಪ್ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.
ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.

ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್ ಹೇಳಿದ್ದಾರೆ.














