ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಕಥೆ ಕಟ್ಟಿ ಧರ್ಮಸ್ಥಳದ ಸುತ್ತ ಶವಗಳಿಗಾಗಿ ಗುಂಡಿ ತೊಡಿಸಿದ್ದ ಮಾಸ್ಕ್ ಮ್ಯಾನ್ ಅರೆಸ್ಟ್ -ಕಹಳೆ ನ್ಯೂಸ್

ಬೆಳ್ತಂಗಡಿ : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ರಾಜ್ಯದ ಜನರನ್ನೇ ದಿಕ್ಕುತಪ್ಪಿಸಿದ ಪ್ರಕರಣದಲ್ಲಿ ಸುಳ್ಳುಗಳ ಸರಮಾಲೆ ಹೆಣೆದು ಕಥೆ ಕಟ್ಟಿದ್ದ ದೂರುದಾರ ಮುಸುಕುಧಾರಿಯನ್ನು ಎಸ್‌ಐಟಿ ಬಂಧಿಸಿದೆ.
ಬಂಧನದ ಬಳಿಕ ಎಸ್‌ಐಟಿ ಮುಸುಕುಧಾರಿಯ ಹೆಸರನ್ನು ಬಹಿರಂಗ ಪಡಿಸಿದ್ದು, ಆತನ ಹೆಸರು ಚಿನ್ನಯ್ಯ ಎಂದು ತಿಳಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾದ ಬಳಿಕ ಸರ್ಕಾರ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ನಂತರ ಎಸ್‌ಐಟಿ ಅಧಿಕಾರಿಗಳು ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಯಾವುದೇ ಮಹತ್ತರವಾದ ಅವಶೇಷಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಿ ಮಾಸ್ಕ್‌ಮ್ಯಾನ್‌ನನ್ನು ವಿಚಾರಣೆಗೊಳಪಡಿಸಿ, ತನಿಖೆ ಪ್ರಾರಂಭಿಸಿ, ಹಲವು ಮಾಹಿತಿಗಳನ್ನು ಕಲೆ ಹಾಕಿತ್ತು.
ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ಮಾಸ್ಕ್‌ಮ್ಯಾನ್‌ನನ್ನು ತೀವ್ರ ವಿಚಾರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಹಲವು ಆಯಾಮಗಳಲ್ಲಿ ಆತನಿಗೆ ಪ್ರಶ್ನೆಗಳನ್ನು ಕೇಳಿದಾಗ ಅನುಮಾನಾಸ್ಪದ ರೀತಿ ಉತ್ತರ ನೀಡಿದ್ದಾನೆ.
ಪ್ರಶ್ನೆಗಳ ಸುರಿಮಳೆ: ದೂರು ನೀಡಿದ ವೇಳೆ ಮುಸುಕುದಾರಿ ತಲೆಬುರುಡೆಯೊಂದನ್ನು ನೀಡಿದ್ದನು. ಆ ತಲೆ ಬುರುಡೆ ಎಲ್ಲಿಂದ ತಂದಿದ್ದು, ಬುರುಡೆ ತಂದಾಗ ಸ್ಥಳದಲ್ಲಿ ನಿನ್ನ ಜೊತೆ ಇದ್ದವರು ಯಾರು, ಬುರುಡೆ ಎತ್ತಿದವರು ಯಾರು, ಸಮಾಧಿಯೊಳಗಿಂದ ನೀನು ಬುರುಡೆ ಅಗೆದು ತಂದಿರುವೆಯಾ, ಕಾಡಿನೊಳಗಿಂದ ಬುರುಡೆ ಎತ್ತಿದ ವೀಡಿಯೋದಲ್ಲಿ ಇರುವವರು ಯಾರು, ಕಾಡಿನ ಒಳಗೆ ಬುರುಡೆ ಸಿಕ್ಕಿದ್ದರೆ ಅದು ಅಸಹಜ ಸಾವಿನ ಪ್ರಕರಣವೋ ಅಥವಾ ಸಮಾಧಿಯಿಂದ ಬುರುಡೆ ಆಗೆದು ತಂದಿರುವಿರಾ, ನಿನ್ನ ಜೊತೆ ಕೈ ಜೋಡಿಸಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರು ಕೇಳಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೆ ಎಸ್‌ಐಟಿ ಅಧಿಕಾರಿಗಳ ನಿರೀಕ್ಷೆಯಂತೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿಲ್ಲ. ಹಾಗಾಗಿ ಆತನ ಮುಂದೆ ವೀಡಿಯೋ ಬಿತ್ತರಿಸಿ ತನಿಖೆ ಪ್ರಕ್ರಿಯೆಯನ್ನು ಎಸ್‌ಐಟಿ ಮುಂದುವರಿಸಿತ್ತು. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಮಾಸ್ಕ್‌ಮ್ಯಾನ್ ಹೆಣೆದಿದ್ದು, ಸುಳ್ಳಿನ ಸರಮಾಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ಎಸ್‌ಐಟಿಗೆ ತಿಳಿಯುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.














