ಬಾಗಲಕೋಟೆಯ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ ಕ್ರಿಕೆಟಿಗ ರಿಷಭ್ ಪಂತ್ -ಕಹಳೆ ನ್ಯೂಸ್

ಬಾಗಲಕೋಟೆ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ – ವಿಕೆಟ್ ಕೀಪರ್ ರಿಷಭ್ ಪಂತ್ ಮೈದಾನದಲ್ಲಿ ಅಬ್ಬರದ ಆಟದ ಮೂಲಕ ಮಿಂಚಿದವರು. ಎಷ್ಟೋ ಪಂದ್ಯದಲ್ಲಿ ತಂಡದ ಗೆಲುವಿಗೆ ರೂವಾರಿಯಾದ ಆಟಗಾರ. ನಿಜ ಜೀವನದಲ್ಲಿ ಪಂತ್ ಮಾನವೀಯ ಕಾರ್ಯವೊಂದನ್ನು ಮಾಡಿ ʼಹೀರೋʼ ಎನ್ನಿಸಿಕೊಂಡಿದ್ದಾರೆ.
ಕರ್ನಾಟಕದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಪಂತ್ ಆರ್ಥಿಕವಾಗಿ ಸಹಾಯ ಮಾಡಿದ್ದು, ಆ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ.
ಬಾಗಲಕೋಟೆ ತಾಲೂಕಿನ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ್ ಎನ್ನುವ ವಿದ್ಯಾರ್ಥಿನಿ ಪಿಯುಸಿಯಲ್ಲಿ 83 % ಅಂಕ ಗಳಿಸಿದ್ದಳು. ಜ್ಯೋತಿಗೆ ತಾನು ಮುಂದೆಯೂ ಕಲಿಯಬೇಕೆನ್ನುವ ಆಸೆಯಿತ್ತು. ಉನ್ನತ ಶಿಕ್ಷಣ ಪಡೆಯುವ ಕನಸಿತ್ತು. ಆದರೆ ಬಡತನ ಮತ್ತು ಆರ್ಥಿಕ ತೊಂದರೆ ಆಕೆಯ ಕನಸಿಗೆ ಅಡ್ಡಿಯಾಗಿತ್ತು.
ಜ್ಯೋತಿಗೆ ಬಿಸಿಎ ಕಲಿಯುವ ಆಸೆಯಿತ್ತು. ಅದಕ್ಕಾಗಿ ಶುಲ್ಕ ಭರಿಸಲು ಸಾಧ್ಯವಾಗಿರಲಿಲ್ಲ. ಜ್ಯೋತಿಯ ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಿದ್ದು, ಮಗಳ ಕಲಿಕೆಗೆ ಶುಲ್ಕ ಪಾವತಿಸುವುದು ಕಷ್ಟವಾಗಿತ್ತು.
ಬಿಸಿಎ ಪ್ರವೇಶ ಪಡೆಯಲು 40 ಸಾವಿರ ಶುಲ್ಕ ಪಾವತಿಸಬೇಕಿತ್ತು. ಪ್ರತಿಭಾವಂತ ವಿದ್ಯಾರ್ಥಿನಿ ಜ್ಯೋತಿ ಅವರ ಸಮಸ್ಯೆ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ ಅವರಿಗೆ ಅರ್ಥವಾಗಿತ್ತು. ಇದರಿಂದಾಗಿ ಅನಿಲ್ ಅವರು ಪಂತ್ ಅವರ ಆಪ್ತ ಸ್ನೇಹಿತ ಅಕ್ಷಯ್ ನಾಯಕ್ ಅವರನ್ನು ಸಂಪರ್ಕಿಸಿ ವಿಚಾರವನ್ನು ಹೇಳಿದ್ದರು. ಅಕ್ಷಯ್ ಅವರು ಪಂತ್ ಅವರಿಗೆ ಜ್ಯೋತಿ ಅವರ ವಿಷಯವನ್ನು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂತ್ ಅವರು 40 ಸಾವಿರ ರೂಪಾಯಿಯನ್ನು ಬಿಎಲ್‌ಡಿಇ ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದು, ಜ್ಯೋತಿ ಅವರು ಕಾಲೇಜಿಗೆ ಹೋಗಲು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.














