ಕಾರ್ಕಳ ಪರಶುರಾಮ ಥೀಂ ಪಾರ್ಕ್ ವಿವಾದ : ಮುನಿಯಾಲ್ ಉದಯ್ ಶೆಟ್ಟಿಗೆ ಟಕ್ಕರ್ ಕೊಟ್ಟ ಹಿತರಕ್ಷಣಾ ವೇದಿಕೆ.! – ಕಹಳೆ ನ್ಯೂಸ್

ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ ವಿವಾದ ಮತ್ತೆ ಮತ್ತೆ ಸುದ್ದಿಯಲ್ಲಿದೆ. ವಿರೋಧ ಬಣಗಳು ಮಾಡಿದ ಆರೋಪಕ್ಕೆ ಖಡಕ್ ಪ್ರತ್ಯುತ್ತರ ನೀಡಿದ್ದರು ಬಿಜೆಪಿ ಪ್ರಮುಖರು. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿಯೇ ಇದೆ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾರ್ಕಳ ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿ, ಕಾಂಗ್ರೆಸ್‌ನ ಮುಖಂಡರು ಗಂಭೀರ ಆರೋಪ ಮಾಡಿದ್ದರು. ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪರಶುರಾಮರ ವಿಗ್ರಹವು ಫೈಬರ್ ನಿಂದ ಮಾಡಲ್ಪಟ್ಟಿದೆ ಎಂಬ ಆರೋಪಕ್ಕೆ ಬ್ರೇಕ್ ಕೊಟ್ಟಿದ್ದು ನ್ಯಾಯಾಲಯದ ಹೇಳಿಕೆ.

ಪರಶುರಾಮರ ವಿಗ್ರಹ ಫೈಬರ್‌ನಿಂದ ಮಾಡಲ್ಪಟ್ಟಿಲ್ಲ; ಲೋಹ ಬಳಸಲಾಗಿದೆ!
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ. ಫೈಬರ್‌ನಿಂದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಮುನಿಯಾಲ್ ಉದಯ ಶೆಟ್ಟಿ ಸೇರಿದಂತೆ ಕೈಪಾಳಯದ ನಾಯಕರು, ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿ ಆರೋಪ ಮಾಡಿ ಡೊಂಬರಾಟ ನಡೆಸಿತ್ತು. ಆ ಮೂಲಕ ಪರಶುರಾಮರ ವಿಷಯದಲ್ಲೂ ರಾಜಕೀಯದ ಕೆಸರು ಎರಚಾಟ ನಡೆಸಿತ್ತು ಕಾಂಗ್ರೆಸ್. ಆದ್ರೆ ಇದಕ್ಕೆ ಬ್ರೇಕ್ ಹಾಕಿದ್ದು ನ್ಯಾಯಾಲಯದ ವರದಿ. ಹೌದು, ನ್ಯಾಯಾಲಯ ಪರಶುರಾಮರ ಮೂರ್ತಿಯನ್ನು ಲೋಹದಿಂದಲೇ ಮಾಡಲಾಗಿದೆ. ಫೈಬರ್ ಬಳಸಿ ನಿರ್ಮಾಣ ಮಾಡಿದ್ದು ಎಂಬ ಆರೋಪ ಸತ್ಯಕ್ಕೆ ದೂರ ಎಂದು ಅಭಿಪ್ರಾಯ ಪಟ್ಟಿತ್ತು.
೩೩ ಅಡಿ ಎತ್ತರ ಪ್ರತಿಮೆಯ ಸುತ್ತ ರಾಜಕೀಯದ ಕರಿ ನೆರಳು.!
ಪ್ರವಾಸೋದ್ಯಮ ಉತ್ತೇಜನ, ಇತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಅಂದಾಜು ೧೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮ ಥೀಮ್ ಪಾಕ್ ಅನ್ನು ೨೦೨೩ರ ಜನವರಿ ೧೭ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಆ ನಂತರದ ದಿನಗಳಲ್ಲಿ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಹೊರಿಸಿತ್ತು., ಆ ಮೂಲಕ ಕೊಂಕು ಮಾತುಗಳು, ಸಾಮಾಜಿಕ ಜಾಲತಾಣದಲ್ಲಿ ಟೀಕೆ, ರಾಜಕೀಯ ಕರಿನೆರಳು ಪರಶುರಾಮ ಥೀಮ್ ಪಾರ್ಕ್‌ಗೆ ಅಂಟಿತ್ತು.
ಇಬ್ಬಾಗವಾಯಿತೇ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿ?
ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ಚಾಲ್ತಿಯಲ್ಲಿರುವಾಗಲೇ ಹಿತರಕ್ಷಣಾ ಸಮಿತಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಸುತ್ತ ಹಲವು ಅನುಮಾನ ಸೃಷ್ಟಿಸಿದೆ. ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮ ಮೂರ್ತಿಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎನ್ನುವ ಮನವಿಯನ್ನು ರಾಜಕೀಯ ಪಕ್ಷದ ನಾಯಕರುಗಳ ಸಹಿತ ಇತರೆ ಮಂದಿಗೆ ಮಾಡಿದ್ದಾಗಿ ಪ್ರಕಟಣೆ ತಿಳಿಸಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಲ್ಲದೆ ಹಿತರಕ್ಷಣಾ ವೇದಿಕೆ ಇಬ್ಭಾಗವಾಯಿತೇ ಅನ್ನೋ ಬಲವಾದ ಅನುಮಾನ ಹುಟ್ಟುಹಾಕಿದೆ.
ಪ್ರಕಟಣೆಯಲ್ಲಿ ಏನೇನಿದೆ.? ಸಮಿತಿಯಿಂದ ದೂರವಾದ ಉದಯ ಶೆಟ್ಟಿ?
“ಮಾನ್ಯ ಉದಯ ಶೆಟ್ಟಿಯವರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯಿಂದ ಬೆಂಬಲ ಅಥವಾ ಯಾವುದೇ ರೀತಿಯ ವಿರೋಧವೂ ಇಲ್ಲ ಹಾಗೂ ಸಲ್ಲಿಸಿರುವ ಅರ್ಜಿಯ ಸಾಧಕ ಬಾಧಕಗಳಿಗೆ ಸ್ವತಃ ಅವರೇ ಹೊಣೆಯಾಗಿರುತ್ತಾರೆ. ಪ್ರಮುಖವಾಗಿ ಬಿಜೆಪಿಯವರಾಗಲಿ, ಕಾಂಗ್ರೇಸ್ಸಿನವರಾಗಲಿ, ಮಾನ್ಯ ಉದಯ ಶೆಟ್ಟಿಯವರಾಗಲಿ ಅಥವಾ ಇತರೇ ಯಾರೇ ಆಗಲಿ ಥೀಂ ಪಾರ್ಕ್ ವಿಚಾರವನ್ನು ವೈಯಕ್ತಿಕವಾಗಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ವಿನಂತಿಸುತ್ತಿದ್ದೇವೆ” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತಂತೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯೊಂದಿಗೆ ಉದಯ ಶೆಟ್ಟಿಯವರು ಯಾವುದೇ ರೀತಿಯ ಮಾತುಕತೆ ನಡೆಸಿರುವುದಿಲ್ಲ. ಹಾಗಾಗಿ ಆ ಅರ್ಜಿಗೆ ಅವರೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ಇದಕ್ಕೂ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾನೂನು ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ನಮ್ಮ ಸಮಿತಿಯು ಪರಶುರಾಮ ಮೂರ್ತಿ ಪುನರ್ ಪ್ರತಿಷ್ಠಾಪನಾ ವಿಚಾರವನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ರಾಜಕೀಯವನ್ನು ಹೊರತುಪಡಿಸಿ ಧಾರ್ಮಿಕ ಉದ್ದೇಶಕ್ಕಾಗಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದಯ ಶೆಟ್ಟಿಯವರ ಮೂಲ ನಿಲುವಿನಲ್ಲಿ ಬದಲಾವಣೆಯಾಗಿದ್ದಲ್ಲಿ, ಮಾನ್ಯ ಉಪಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವವರೆಗಿನ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕೇ ಹೊರತು ಇದಕ್ಕೆಲ್ಲಾ ಸ್ಪಷ್ಟನೆ ನೀಡುವುದು ನಮ್ಮ ಸಮಿತಿಯ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಮಿತಿಯ ಪರವಾಗಿ ಸ್ಪಷ್ಟನೆ ನೀಡಿದ್ದಾರೆ ಕಾರ್ಕಳ ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೃಷ್ಣ ಎ ಶೆಟ್ಟಿ.
ಉದಯ್ ಶೆಟ್ಟಿಗೆ ಟಕ್ಕರ್ ಕೊಟ್ಟ ಹಿತರಕ್ಷಣಾ ವೇದಿಕೆ.!
ಪರಶುರಾಮ ಮೂರ್ತಿಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎನ್ನುವ ಮನವಿಯನ್ನು ಮಾಡಲಾಗಿದೆ. ಈ ಮನವಿ ಮಾಡಿದ್ದಾರೆ ಎಂದಾದರೆ, ಉದಯ್ ಶೆಟ್ಟಿ ಅವರು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಅನ್ನುವುದು ಕೂಡ ಅಷ್ಟೇ ಸತ್ಯ. ಈ ಒಂದು ಪ್ರಕಟಣೆಯೇ ಮುನಿಯಾಲು ಉದಯ್ ಶೆಟ್ಟಿ ಅವರ ಅಸಲಿ ಮುಖವನ್ನು ಬಯಲಾಗುವಂತೆ ಮಾಡಿದೆ. ರಕ್ಷಣೆಯ ಹೆಸರಲ್ಲಿ ಮಾಡಿದ್ದು ಗಂಭೀರ ಆರೋಪಗಳ ಕೆಸರಿನ ಎರಚಾಟ, ರಾಜಕೀಯ ಬೇಳೆಯನ್ನು ಬೇಯಿಸಲು ಇದನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಎಂಬ ಅಂಶ ಮತ್ತೆ ಮತ್ತೆ ಸಾಬೀತು ಆಗಿದೆ.














